ಕೃಷ್ಣಾ ನದಿ ಭೋರ್ಗರೆತಕ್ಕೆ ಸಾವಿರಾರು ಹೆಕ್ಟೇರ್ ಬೆಳೆ ನಾಶ

Ravi Talawar
ಕೃಷ್ಣಾ ನದಿ ಭೋರ್ಗರೆತಕ್ಕೆ ಸಾವಿರಾರು ಹೆಕ್ಟೇರ್ ಬೆಳೆ ನಾಶ
WhatsApp Group Join Now
Telegram Group Join Now

ಚಿಕ್ಕೋಡಿ: ಚಿಕ್ಕೋಡಿಯಲ್ಲಿ ಕೃಷ್ಣಾ ನದಿ ಅಬ್ಬರಿಸುತ್ತಿದೆ. ನದಿ ಪಾತ್ರ ಬಿಟ್ಟು ಸುಮಾರು ಅರ್ಧ ಕಿಲೋ ಮೀಟರ್​​ ವ್ಯಾಪ್ತಿಯ ಮನೆ, ಕೃಷಿ ಜಮೀನುಗಳು ಜಲಾವೃತವಾಗಿವೆ. ಪ್ರವಾಹಪೀಡಿತರನ್ನು ಕಾಳಜಿ ಕೇಂದ್ರಗಳು ಹಾಗೂ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಕಳೆದೊಂದು ವಾರದಿಂದ ಕೃಷಿ ಜಮೀನುಗಳಿಗೆ ನದಿ ನೀರು ನುಗ್ಗಿ ಉದ್ದು, ತೊಗರಿ, ಕಬ್ಬು, ಈರುಳ್ಳಿ ಸೇರಿದಂತೆ ಹಲವು ಬೆಳೆಗಳು ಕೊಳೆಯಲಾರಂಭಿಸಿವೆ. ದಿನ ದಿನಕ್ಕೆ ನೀರಿನ ಮಟ್ಟ ಹೆಚ್ಚಾಗುತ್ತಿದೆ.

ನದಿಯ ಎರಡೂ ಬದಿಗಳಲ್ಲಿ ಕಪ್ಪು ಮಣ್ಣಿನಿಂದ ಕೂಡಿದ ಜಮೀನುಗಳಿವೆ. ಈ ಭಾಗದಲ್ಲಿ ಹೇರಳವಾಗಿ ಕಬ್ಬು ಬೆಳೆಯುತ್ತಾರೆ. ಕಳೆದ ಫೆಬ್ರವರಿ, ಮಾರ್ಚ್​ ತಿಂಗಳಲ್ಲಿ ಕೃಷ್ಣಾ ನದಿ ಸಂಪೂರ್ಣ ಬತ್ತಿ ಹೋಗಿತ್ತು. ಆಗ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿತ್ತು. ಜೂನ್ ಮೊದಲನೇ ವಾರದಲ್ಲಿ ನದಿಯಲ್ಲಿ ನೀರು ಬರುತ್ತಿದ್ದಂತೆ ರೈತರು ಸಂತೋಷ ವ್ಯಕ್ತಪಡಿಸಿ ನದಿಗೆ ಪೂಜೆ ಸಲ್ಲಿಸಿ ಸ್ವಾಗತಿಸಿದ್ದರು.

ಆದರೆ, ಇದೀಗ ರೈತ ನದಿಯ ರೌದ್ರಾವತಾರಕ್ಕೆ ಬೆಚ್ಚಿಬಿದ್ದಿದ್ದಾನೆ. ಅಪಾಯ ಮಟ್ಟ ಮೀರಿ ಹರಿಯುತ್ತಿರುವುದರಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ರೈತ ಭೂಪಾಲ್ ಹಳಿಂಗಳಿ ಎಂಬವರು ಮಾತನಾಡಿ, ”ಕೃಷ್ಣಾ ನದಿಯಿಂದ ಉತ್ತಮ ಜೀವನ ಕಟ್ಟಿಕೊಳ್ಳಬೇಕೆಂಬ ರೈತರಿಗೆ ಪ್ರತಿವರ್ಷ ಒಂದಿಲ್ಲೊಂದು ಪೆಟ್ಟು ಬೀಳುತ್ತಿದೆ. ಇದರಿಂದ ರೈತರ ಜೀವನ ಕಷ್ಟಕರವಾಗಿದೆ. ಕಳೆದ ಬಾರಿ ನದಿಯಲ್ಲಿ ನೀರು ಬತ್ತಿ ಹೋಗಿತ್ತು. ಈ ಬಾರಿ ಪ್ರವಾಹ ಎದುರಾಗಿದೆ. ಕೃಷ್ಣಾ ನದಿ ನಂಬಿಕೊಂಡೇ ನಾವು ಜೀವನ ಸಾಗಿಸುವವರು. ನದಿಯಿಂದ ನಮಗೆ ಪ್ರತಿವರ್ಷ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದೆ. ಸರ್ಕಾರಗಳು ಪ್ರತಿ ಎಕರೆಗೆ 10 ಸಾವಿರ ರೂಪಾಯಿಯಂತೆ ಪರಿಹಾರ ನೀಡಿ ಕೈತೊಳೆದುಕೊಂಡು ಸುಮ್ಮನಾಗುತ್ತವೆ. ಸರ್ಕಾರ ತುರ್ತಾಗಿ ಮಧ್ಯಪ್ರವೇಶಿಸಿ ಶಾಶ್ವತ ನೆರವು ನೀಡಬೇಕು” ಎಂದು ಆಗ್ರಹಿಸಿದರು.

WhatsApp Group Join Now
Telegram Group Join Now
Share This Article