ಸೋಮಸಮುದ್ರದ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ಟಿ. ಎಚ್. ಎಂ. ಬಸವರಾಜ್ ಮನವಿ

Ravi Talawar
ಸೋಮಸಮುದ್ರದ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ಟಿ. ಎಚ್. ಎಂ. ಬಸವರಾಜ್ ಮನವಿ
WhatsApp Group Join Now
Telegram Group Join Now
ಬಳ್ಳಾರಿ: 15..ಸಿರುಗುಪ್ಪ ರಸ್ತೆಯ ಸೋಮಸಮುದ್ರ ಗ್ರಾಮದ ಐತಿಹಾಸಿಕ ದೇವಾಲಯಗಳು, ಶಾಸನಗಳು ಹಾಗೂ ಶಿಲ್ಪಕಲಾ ನಿದರ್ಶನಗಳ ಸಂರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಇತಿಹಾಸ ಅಧ್ಯಯನ ತಂಡ ಮನವಿ ಮಾಡಿದೆ.
ಕರ್ನಾಟಕ ಇತಿಹಾಸ ಅಕಾಡೆಮಿಯ ಬಳ್ಳಾರಿ ಜಿಲ್ಲಾ ಅಧ್ಯಕ್ಷರಾದ ಟಿ. ಎಚ್. ಎಂ. ಬಸವರಾಜ್ ಹಾಗೂ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಡಾ. ಎಚ್. ತಿಪ್ಪೇಸ್ವಾಮಿ, ಡಾ. ಗೋವಿಂದ್ ಮತ್ತು ಡಾ. ರಮೇಶ್ ಕುಂಬಾರ ಅವರ ನೇತೃತ್ವದ ಇತಿಹಾಸ ಅಧ್ಯಯನ ತಂಡವು ಇತ್ತೀಚೆಗೆ ಸೋಮಸಮುದ್ರ ಗ್ರಾಮಕ್ಕೆ ಭೇಟಿ ನೀಡಿ ಪ್ರಾಚೀನ ದೇವಾಲಯಗಳು, ಬಾವಿ, ಶಿಲ್ಪಗಳು, ಮೂರ್ತಿಗಳು ಮತ್ತು ಶಾಸನಗಳ ಪರಿಶೀಲನೆ ನಡೆಸಿತು.
ಅಧ್ಯಯನದ ವೇಳೆ ಬಿಳೇ ಬಂಡೆ ಬಸವಣ್ಣ ದೇವಾಲಯದ ಹತ್ತಿರದ ಅಪ್ರಕಟಿತ ಶಾಸನವೊಂದನ್ನು ಪತ್ತೆಹಚ್ಚಲಾಗಿದೆ. ಅಲ್ಲದೆ, ಗ್ರಾಮದಲ್ಲಿರುವ ಕಾಶಿ ವಿಶ್ವೇಶ್ವರ ಮತ್ತು ನರಸಿಂಹ ದೇವಾಲಯಗಳು ಹಾಗೂ ನಂದಿ ವಿಗ್ರಹಗಳು ಶಿಲ್ಪಕಲೆಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದ್ದು, ಇವುಗಳನ್ನು ಕುರುಗೋಡು ಸಿಂಧರ ರಾಜನಾದ ಎರಡನೇ ರಾಚಮಲ್ಲ ತಮ್ಮ ಕಾಲದಲ್ಲಿ ನಿರ್ಮಿಸಿದ್ದರೆಂದು ಶಾಸನಗಳು ಸೂಚಿಸುತ್ತವೆ.
ಮುಂದಿನ ವಿಜಯನಗರ ಕಾಲದಲ್ಲಿ ದೊರೆಗಳು ಈ ದೇವಾಲಯಗಳಿಗೆ ಅನೇಕ ದಾನ-ದತ್ತಿಗಳನ್ನು ನೀಡಿ ಪ್ರೋತ್ಸಾಹಿಸಿರುವುದಾಗಿ ಅಧ್ಯಯನದಿಂದ ತಿಳಿದುಬಂದಿದೆ. ಆದರೆ, ಈ ಸ್ಮಾರಕಗಳು ಹಾಗೂ ಪುಷ್ಕರಣಿಗಳು ಈಗ ಅವನತಿ ಹೊಂದಿರುವುದರಿಂದ, ಅವುಗಳ ತುರ್ತು ಸಂರಕ್ಷಣೆ ಅಗತ್ಯವೆಂದು ಅಧ್ಯಯನ ತಂಡ ಶಿಫಾರಸು ಮಾಡಿದೆ.
ಇತಿಹಾಸ ಅಕಾಡೆಮಿಯ ಜಿಲ್ಲಾಧ್ಯಕ್ಷ ಟಿ. ಎಚ್. ಎಂ. ಬಸವರಾಜ್ ಅವರು ಸಂಬಂಧಿತ ಇಲಾಖೆಗಳು ಶೀಘ್ರ ಕ್ರಮ ಕೈಗೊಂಡು ಈ ಅಮೂಲ್ಯ ಪಾರಂಪರಿಕ ಸ್ಮಾರಕಗಳನ್ನು ಉಳಿಸಬೇಕು ಎಂದು ಮನವಿ ಮಾಡಿದ್ದಾರೆ.
WhatsApp Group Join Now
Telegram Group Join Now
Share This Article