ಮೂರನೇ ವಿಶ್ವ ಕನ್ನಡ ಸಮ್ಮೇಳನಕ್ಕೆ ಬೇಕಿದೆ ಸಮಸ್ತ ಕನ್ನಡ ಮನಸ್ಸುಗಳ ಸಹಕಾರ

Ravi Talawar
ಮೂರನೇ ವಿಶ್ವ ಕನ್ನಡ ಸಮ್ಮೇಳನಕ್ಕೆ ಬೇಕಿದೆ ಸಮಸ್ತ ಕನ್ನಡ ಮನಸ್ಸುಗಳ ಸಹಕಾರ
WhatsApp Group Join Now
Telegram Group Join Now

ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂಬ ಕವಿ ವಾಣಿಯಂತೆ ಕನ್ನಡಕ್ಕಾಗಿ ನಾವು ಪ್ರತಿ ದಿನ ಹೊಸ ಹೊಸ ಆಲೋಚನೆಗಳನ್ನು ಮಾಡಬೇಕಾಗುತ್ತದೆ, ಈ ನಿಟ್ಟಿನಲ್ಲಿ ಸರ್ಕಾರವು ಸಹ ಕೈಜೋಡಿಸುತ್ತಿರುವುದು ಹೆಮ್ಮೆಯ ಸಂಗತಿಯೂ ಹೌದು.

ಕನ್ನಡ ಸಾಹಿತ್ಯ ಪರಿಷತ್ತು ಕೂಡ ಅನೇಕ ಕನ್ನಡ ಪರ ಸಂಘಟನೆಗಳೊಂದಿಗೆ ಸಹಕಾರ ಪಡೆದು ನಾಡಿನಾದ್ಯಂತ ಅನೇಕ ಕನ್ನಡ ಕಾರ್ಯಕ್ರಮಗಳನ್ನು, ಅಗಣಿತ ಜಿಲ್ಲಾ ತಾಲೂಕು ರಾಜ್ಯ ಸಮ್ಮೇಳನಗಳನ್ನು ಮಾಡುತ್ತಾ ಬರುವುದು ಶ್ಲಾಘನೀಯ. ಹಾಗೆಯೇ ನಮ್ಮ ನಾಡು-ನುಡಿ ನೆಲ-ಜಲ ಪ್ರಾದೇಶಿಕ ಅಭಿವೃದ್ಧಿಗೆ ಪೂರಕಾವಾಗುವಂತೆ ವಿಶ್ವ ಕನ್ನಡ ಸಮ್ಮೇಳನವು ಅತ್ಯಂತ ಪ್ರಾಮುಖ್ಯತೆಯನ್ನು ಪಡೆಯುತ್ತದೆ.ಕನ್ನಡ ಮನಸ್ಸುಗಳಿಗೆಲ್ಲಾ ತಿಳಿದಿರುವ ಹಾಗೆ ಜಗತ್ತಿನಾದ್ಯಂತ ಹರಡಿರುವ ಕನ್ನಡಿಗರನ್ನು ಒಗ್ಗೂಡಿಸಿ ಕನ್ನಡ ನಾಡು-ನುಡಿಗೆ ಸಂಬಂಧಿಸಿದ ವಿಷಯಗಳನ್ನು ಕುರಿತು ನಡೆಸುವ ಸಮ್ಮೇಳನವೇ ವಿಶ್ವ ಕನ್ನಡ ಸಮ್ಮೇಳನವಾಗಿದೆ.

ಪ್ರಪ್ರಥಮ ವಿಶ್ವ ಕನ್ನಡ ಸಮ್ಮೇಳನವು 1985 ರಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ ಕರ್ನಾಟಕ ರಾಜ್ಯವಾಗಿದ್ದ ಮೈಸೂರಿನಲ್ಲಿ ನಡೆಯಿತು. ಸದರಿ ಸಮ್ಮೇಳನವು ಹೆಸರಾಂತ ಸಾಹಿತಿ ಶಿವರಾಮ ಕಾರಂತರವರ ಅಧ್ಯಕ್ಷತೆಯಲ್ಲಿ
ರಾಷ್ಟ್ರಕವಿ ಕುವೆಂಪುರವರ ಉದ್ಘಾಟನೆಯೊಂದಿಗೆ ಬಹು ಅರ್ಥಪೂರ್ಣವಾಗಿ ನಡೆಯಿತು, ಸದರಿ ಸಮ್ಮೇಳನದಲ್ಲಿ ಪ್ರಸಿದ್ಧ ರಾಜಕಾರಣಿಯಾದ ರಾಜೀವ್ ಗಾಂಧಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು
ಎನ್ನುವುದು ಇಲ್ಲಿ ಉಲ್ಲೇಖನಾರ್ಹವಾಗಿದೆ.

ದ್ವಿತೀಯ ವಿಶ್ವ ಕನ್ನಡ ಸಮ್ಮೇಳನವು ಬೆಳಗಾವಿಯಲ್ಲಿ 2011 ರಲ್ಲಿ ನಡೆಯಿತು ಅಂದಿನ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನೆರವೇರಿತು, ಸದರಿ ದ್ವಿತೀಯ ಸಮ್ಮೇಳನವು ಖ್ಯಾತ ಉದ್ಯಮಿಗಳಾದ ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕರಾದ ನಾರಾಯಣಮೂರ್ತಿಯವರು ಈ ಸಮ್ಮೇಳನವನ್ನು ಉದ್ಘಾಟಿಸಿದರು.ಮುಖ್ಯ ಅತಿಥಿಯಾಗಳಾಗಿ ಹೆಸರಾಂತ ಚಲನಚಿತ್ರ ನಟಿ ಶ್ರೀಮತಿ ಐಶ್ವರ್ಯಾ ರೈ ಭಾಗವಹಿಸಿದ್ದರು. ಈ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದು ನಾಡೋಜ ದೇ ಜವರೇಗೌಡರು. ಈ ಸಮ್ಮೇಳನವು ಅನೇಕ ವಿಚಾರಗಳನ್ನು ಒಳಗೊಂಡಂತೆ ಸಾವಿರಾರು ಜನರು ಭಾಗವಹಿಸಿದ್ದು ಒಂದು ಇತಿಹಾಸವೇ ಸರಿ.

ಮೂರನೇ ವಿಶ್ವ ಕನ್ನಡ ಸಮ್ಮೇಳನವನ್ನು 2017ರಲ್ಲಿ ದಾವಣಗೆರೆಯಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆಗಿನ ಸರ್ಕಾರ ಅದಕ್ಕಾಗಿ ರೂಪಾಯಿ 20 ಕೋಟಿ ಮಂಜೂರು ಮಾಡಿತ್ತು ಎಂದು ಅಂದಿನ ಪತ್ರಿಕೆಗಳಲ್ಲಿ ನೋಡಿದ ನೆನಪು ಹಾಗೆಯೇ ಸ್ವಾಗತ ಸಮಿತಿ, ಮೆರವಣಿಗೆ, ಆತಿಥ್ಯ, ಸಾಂಸ್ಕೃತಿಕ, ಕವಿಗೋಷ್ಠಿ, ವಿಚಾರ ಸಂಕಿರಣ, ಕನ್ನಡ ಪುಸ್ತಕ ಪ್ರದರ್ಶನ, ವಸ್ತು ಪ್ರದರ್ಶನ, ಚಲನಚಿತ್ರ, ಕ್ರೀಡಾ, ಪ್ರಚಾರ, ಮಹಿಳಾ, ಮೂಲಸೌಕರ್ಯ, ಕನ್ನಡ ಮತ್ತು ವಿಜ್ಞಾನ ತಂತ್ರಜ್ಞಾನ, ಕನ್ನಡ-ಕನ್ನಡಿಗ-ಕರ್ನಾಟಕ ಹಾಗೂ ಕಿಶೋರ ಸಮಿತಿ ಹೀಗೆ ಒಟ್ಟು 16 ಸಮಿತಿಗಳನ್ನು ಕನ್ನಡ, ಸಂಸ್ಕೃತಿ ಮತ್ತು ವಾರ್ತಾ ಇಲಾಖೆ ರಚಿಸಿತ್ತು.
ಆದರೆ, ಬಳಿಕ ಈ ಕಾರ್ಯ ಸ್ಥಗಿತಗೊಂಡಿತು.

ಚುನಾವಣೆಯೂ ಹತ್ತಿರ ಬಂದಿದ್ದರಿಂದ ಮಂಜೂರಾದ ಅನುದಾನ ಬಿಡುಗಡೆಗೊಳ್ಳಲಿಲ್ಲ.ಈ ವರ್ಷವಾದರೂ ವಿಶ್ವ ಮೂರನೇ ವಿಶ್ವ ಕನ್ನಡ ಸಮ್ಮೇಳನ ನಡೆಯಲೇ ಬೇಕು ಎನ್ನುವುದು ಜಿಲ್ಲೆಯ ಹಾಗೂ ನಾಡಿನ ಸಮಸ್ತ ಕನ್ನಡಾಭಿಮಾನಿಗಳು, ವಿವಿಧ ಕನ್ನಡ ಪರ ಸಂಘ ಸಂಸ್ಥೆ ಸಂಘಟನೆಗಳು, ಹಾಗೂ ಸಾಹಿತ್ಯ ಪ್ರಿಯರು, ಸಮ್ಮೇಳನ ಪ್ರಿಯರ ಒತ್ತಾಯವಾಗಿದೆ .

ಅವಿಭಜಿತ ಚಿತ್ರದುರ್ಗ ಜಿಲ್ಲೆಯಾಗಿದ್ದ ಸಮಯದಲ್ಲಿ 1992ರಲ್ಲಿ 61ನೇ ಕನ್ನಡ ಸಾಹಿತ್ಯ ಸಮ್ಮೇಳನ ದಾವಣಗೆರೆಯಲ್ಲಿ ನಡೆದಿತ್ತು. ಜಿ.ಎಸ್‌. ಶಿವರುದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಇದಾಗಿ ಐದು ವರ್ಷಗಳ ಬಳಿಕ ದಾವಣಗೆರೆ ಪ್ರತ್ಯೇಕ ಜಿಲ್ಲೆಯಾಯಿತು. ಹೊಸ ಜಿಲ್ಲೆ ಬೆಳ್ಳಿಹಬ್ಬವನ್ನೂ ಆಚರಿಸಿತು ಅನಂತರ ಅನೇಕ ತಾಲೂಕು ಜಿಲ್ಲಾ ಸಮ್ಮೇಳನಗಳು ನಡೆದವು ಅದೇ ರೀತಿಯಲ್ಲಿ 2017 ರಿಂದ ವಿಶ್ವ ಕನ್ನಡ ಸಮ್ಮೇಳನವು ದಾವಣಗೆರೆಯಲ್ಲಿ ನಡೆಯಬೇಕು ಎನ್ನುವುದು ಕನಸಾಗಿಯೇ ಉಳಿದಿದೆ.
ಆದುದರಿಂದ 2025 ನೇ ಸಾಲಿನಲ್ಲಿ ಮೂರನೇ ವಿಶ್ವ ಕನ್ನಡ ಸಮ್ಮೇಳನವು ನಡೆಯಲು ನಾಡಿನ ಹಿರಿಕಿರಿಯ ಸಾಹಿತಿಗಳು ಹಾಗೂ ಸಾಹಿತ್ಯಾಸಾಕ್ತರು ಜನಪ್ರತಿನಿಧಿಗಳು, ಸ್ಥಳೀಯ ಸಂಸ್ಥೆಗಳು, ವಿವಿಧ ಕನ್ನಡಪರ ಸಂಘಟನೆಗಳು, ಬುದ್ಧಿಜೀವಿಗಳು ಪ್ರಗತಿಪರಚಿಂತಕರು ಹೀಗೆ ಸರ್ವರು ಸರ್ಕಾರದ ಗಮನಕ್ಕೆ ತಂದು ಸದರಿ ವಿಶ್ವ ಕನ್ನಡ ಸಮ್ಮೇಳನವನ್ನು ನಡೆಸುವಂತೆ
ಒತ್ತಾಯಿಸುವುದು ಅನಿವಾರ್ಯವಾಗಿದೆ ಈ ದಿಸೆಯಲ್ಲಿ ಕನ್ನಡ ಮನಸುಗಳ ಸಹಕಾರವೂ ಅತ್ಯಗತ್ಯ

ಡಾ.ಉಮೇಶ್ ಬಾಬು ಮಠದ್, (ಉಬಾಮ)
ಸಾಹಿತಿ ಹಾಗೂ ಸಾಮಾಜಿಕ ಚಿಂತಕರು, ದಾವಣಗೆರೆ.
9606363449

WhatsApp Group Join Now
Telegram Group Join Now
Share This Article