ಯಲಹಂಕ ಬಳಿ 153 ಎಕರೆಯಲ್ಲಿ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ: ಈಶ್ವರ ಖಂಡ್ರೆ

Ravi Talawar
ಯಲಹಂಕ ಬಳಿ 153 ಎಕರೆಯಲ್ಲಿ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ: ಈಶ್ವರ ಖಂಡ್ರೆ
WhatsApp Group Join Now
Telegram Group Join Now

• ಶೀಘ್ರ ಶಂಕುಸ್ಥಾಪನೆ: ವನ್ಯಜೀವಿ ಸಪ್ತಾಹದ ಸಮಾರೋಪದಲ್ಲಿ ಘೋಷಣೆ

ಬೆಂಗಳೂರು, ಅ.7: ಉತ್ತರ ಬೆಂಗಳೂರಲ್ಲಿ ಶ್ವಾಸತಾಣ ಅಂದರೆ ಲಂಗ್ ಸ್ಪೇಸ್ ಕೊರತೆ ಇದ್ದು, ಯಲಹಂಕ ಆರ್.ಟಿ.ಓ. ಬಳಿ ಇರುವ ಮಾದಪ್ಪನಹಳ್ಳಿಯ 153 ಎಕರೆ ಅರಣ್ಯ ಭೂಮಿಯಲ್ಲಿ ಕಬ್ಬನ್ ಪಾರ್ಕ್ ಮಾದರಿಯಲ್ಲಿ “ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ’ಕ್ಕೆ ಶೀಘ್ರ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ಅರಣ್ಯ ಭವನದಲ್ಲಿಂದು ನಡೆದ ವನ್ಯಜೀವಿ ಸಪ್ತಾಹದ ಔಪಚಾರಿಕ ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, 153 ಎಕರೆ ಅರಣ್ಯ ಭೂಮಿಯನ್ನು, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತಕ್ಕೆ ಗುತ್ತಿಗೆ ನೀಡಲಾಗಿತ್ತು. ಈಗ ಗುತ್ತಿಗೆ ಅವಧಿ ಮುಗಿದಿದ್ದು, ಸಾಮಾಜಿಕ ಜವಾಬ್ದಾರಿ- ಇಲಾಖೆ ಮತ್ತು ಸಿ.ಎಸ್.ಆರ್ ನಿಧಿಯ ನೆರವಿನೊಂದಿಗೆ ಕಬ್ಬನ್ ಪಾರ್ಕ್ ಮಾದರಿಯಲ್ಲಿ ಒಂದು ಸಸ್ಯೋದ್ಯಾನ ಮಾಡಲಾಗುವುದು ಎಂದರು.

ಯಲಹಂಕ ಸುತ್ತುಮುತ್ತ ಬೆಂಗಳೂರು ವ್ಯಾಪಕವಾಗಿ ಬೆಳೆದಿದೆ. ಈ ಹಿನ್ನೆಯಲ್ಲಿ ಜನರಿಗೆ ಅನುಕೂಲವಾಗುವಂತೆ ಇಲ್ಲಿ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ ಸ್ಥಾಪಿಸಿದಲ್ಲಿ ಅದು ಅತ್ಯಂತ ಆಕರ್ಷಣೀಯ ತಾಣವಾಗುತ್ತದೆ ಎಂದರು.

ಬೆಂಗಳೂರು ನಗರವು ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಭಾರತದ ಗಾರ್ಡನ್ ಸಿಟಿ ಎನ್ನುವ ಹೆಗ್ಗಳಿಕೆಯನ್ನು ಹೊಂದಿದೆ. ಭಾರತೀಯ ಅರಣ್ಯ ಸಮೀಕ್ಷಾ ವರದಿಯಂತೆ ಬೆಂಗಳೂರು ನಗರವು ಭಾರತದಲ್ಲಿ ಮೂರನೇ ಅತಿ ಹೆಚ್ಚು ಭೂ ಪ್ರದೇಶವನ್ನು ಹೊಂದಿರುವ ನಗರವಾಗಿದ್ದು, ಸುಮಾರು 89 ಚದರ ಕಿಲೋಮೀಟರ್‌ನಷ್ಟು ಅರಣ್ಯ ಪ್ರದೇಶವನ್ನು ಹೊಂದಿದೆ. ಬೆಂಗಳೂರಿನ ವೃಕ್ಷ ಹೊದಿಕೆ ಶೇ.6.81 ರಷ್ಟಿದೆ. ಕಳೆದ 10 ವರ್ಷಗಳಲ್ಲಿ ಬೆಂಗಳೂರು ನಗರದಲ್ಲಿ 5 ಚದರ ಕಿಲೋಮೀಟರ್‌ ನಷ್ಟು ಹಸಿರು ಹೊದಿಕೆ ಕಡಿಮೆಯಾಗಿದೆ ಎಂದರು.

ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದ ಉದ್ಯಾನ ನಗರಿ ಎನ್ನುವ ಹೆಗ್ಗಳಿಕೆಯನ್ನು ಮರುಸ್ಥಾಪಿಸಲು ಇಲಾಖೆಯು ಸಾರ್ವಜನಿಕರ ಸಹಭಾಗಿತ್ವದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಇನ್ನು ಹೆಚ್ಚು ಹೆಚ್ಚಾಗಿ ಮಾಡಬೇಕಾಗಿದೆ. ಜೊತೆಗೆ ರಾಜಧಾನಿಯಲ್ಲಿ ಒತ್ತುವರಿಯಾಗಿರುವ ಅರಣ್ಯಭೂಮಿಯನ್ನು ಮರಳಿ ವಶಕ್ಕೆ ಪಡೆಬೇಕಿದೆ ಎಂದು ಈಶ್ವರ ಖಂಡ್ರೆ ಹೇಳಿದರು.

ವಾರಾಂತ್ಯ ಮತ್ತು ರಜಾ ದಿನಗಳಲ್ಲಿ ವನ್ಯ ಜೀವಿಗಳನ್ನು ನೋಡಲೆಂದೇ ಅರಣ್ಯದಲ್ಲಿ ಸಫಾರಿಗೆ ಮತ್ತು ಮೃಗಾಲಯಗಳಿಗೆ ಜನರು ಹೋಗುತ್ತಾರೆ. ಸಫಾರಿಯಲ್ಲಿ ಹುಲಿ, ಚಿರತೆ, ಕರಡಿ, ಗರಿಬಿಚ್ಚಿ ನರ್ತಿಸುವ ನವಿಲು ಕಂಡರೆ ಮಂತ್ರಮುಗ್ಧರಾಗುತ್ತಾರೆ. ಅದೇ ವನ್ಯಜೀವಿಗಳು ಕಾಣದಿದ್ದರೆ ಬೇಸರಗೊಳ್ಳುತ್ತಾರೆ. ಮನಸ್ಸಿಗೆ ಇಷ್ಟು ಸಂತೋಷ, ಮುದ ನೀಡುವ ವನ್ಯ ಮೃಗಗಳನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದರು.

ಈ ಹಿನ್ನೆಲೆಯಲ್ಲಿ ವನ್ಯ ಮೃಗಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಜನರಲ್ಲಿ ಅರಿವು ಮೂಡಿಸಲು ಮುಂದಿನ ಪೀಳಿಗೆಗೆ ವನ್ಯ ಮೃಗಗಳ ಮಹತ್ವ ತಿಳಿಸಲು ಪ್ರತಿವರ್ಷ ಅಕ್ಟೋಬರ್ 2ರಿಂದ 8ರವರೆಗೆ ವನ್ಯಜೀವಿ ಸಪ್ತಾಹ ಆಚರಿಸಲಾಗುತ್ತದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಪ್ರಧಾನ ಮುಖ್ಯ ಅರಣ್ಯಸಂರಕ್ಷಣಾಧಿಕಾರಿ -ಅರಣ್ಯ ಕಾರ್ಯಪಡೆ ಮುಖ್ಯಸ್ಥ ಬ್ರಿಜೇಶ್ ಕುಮಾರ್ ದೀಕ್ಷಿತ್, ಮುಖ್ಯ ವನ್ಯ ಜೀವಿ ಪರಿಪಾಲಕರಾದ ಸುಭಾಷ್ ಮಾಲ್ಖಡೆ ಮತ್ತಿತರರು ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ವನ್ಯಜೀವಿ ಛಾಯಾಚಿತ್ರ ಪ್ರದರ್ಶನ ಮತ್ತು ಅಂಚೆ ಚೀಟಿ ಪ್ರದರ್ಶನ ವೀಕ್ಷಿಸಿದರು

WhatsApp Group Join Now
Telegram Group Join Now
Share This Article