ಮೂಡಲಗಿ : ಅನ್ನದಾತರು ಸ್ವಾಭಿಮಾನಿಗಳು ಯಾರಿಗೂ ಹೆದರುವವರಲ್ಲ. ಜಗತ್ತಿನಲ್ಲಿ ಅನ್ನದಾತ ಇಲ್ಲದೆ ಯಾರೂ ಇಲ್ಲ, ಅವರಿಗೆ ಮೊದಲು ಮೋಸವಾಗಬಾರದು ಎಂದು ಶಶಿಕಾಂತ ಗುರೂಜಿ ಹೇಳಿದರು.
ತಾಲೂಕಿನ ಖಾನಟ್ಟಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಾಭಿಮಾನಿ ರೈತ ಸಮಾವೇಶದಲ್ಲಿ ದಿವ್ಯ ಸಾನಿಧ್ಯ ವಹಿಸಿ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ಘಟನೆ ಬಗ್ಗೆ ಪ್ರಧಾನಮಂತ್ರಿ ಮೋದಿ ಅವರು ಆದ? ಬೇಗ ಕ್ರಮ ಕೈಗೊಳ್ಳಬೇಕೆಂದು ವೇದಿಕೆಯ ಮುಖಾಂತರ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರಿಗೆ ಮನವಿ ಮಾಡಿದರು. ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ಮಾತನಾಡಿ ಡಿಸಿಸಿ ಬ್ಯಾಂಕಿನಲ್ಲಿ ಕೆಲವು ವ್ಯಕ್ತಿಗಳಿಗೆ ಕೋಟಿಗಟ್ಟಲೆ ಸಾಲ ಕೊಡುತ್ತ, ನಮ್ಮ ರೈತರಿಗೆ ಎಕರೆ ಭೂಮಿಗೆ ೪೦ಸಾವಿರ ರೂಪಾಯಿ ಸಾಲ ಕೊಡುತ್ತ ತಾರತಮ್ಯ ಮಾಡುತ್ತಾರೆ. ಇನ್ನು ಮುಂದೆ ರೈತರಿಗೂ ಎಕರೆಗೆ ೧ ಲಕ್ಷ ರೂಪಾಯಿ ಸಾಲ ಕೊಡಬೇಕು, ಇಲ್ಲದಿದ್ದರೆ ಡಿಸಿಸಿ ಬ್ಯಾಂಕ್ ಎದುರು ಹೋರಾಟ ಮಾಡಬೇಕಾಗುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾನ್ಯ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಋಷಿ ಮತ್ತು ಕೃಷಿ ಭಾರತದ ಅವಿಭಾಜ್ಯ ಅಂಗಗಳು. ಈ ಎರಡೂ ಸಂಸ್ಕೃತಿಗೆ ಬಹಳ ಮಹತ್ವ ನೀಡಲಾಗಿದೆ. ಭಾರತದ ಆಹಾರ ಉತ್ಪಾದನೆ ಮೊದಲಿಗಿಂತಲೂ ಜಾಸ್ತಿಯಾಗಿದ್ದರೂ, ರೈತರ ಸಾಲ ಮಾತ್ರ ಸ್ವಲ್ಪವೂ ಕಡಿಮೆಯಾಗಿಲ್ಲ ಆದ ಕಾರಣ ಜನರು ರಾಜಕಾರಣಿಗಳ ಕೆಲಸಗಳನ್ನು ಅವಲೋಕಿಸಿ ಮತದಾನ ಮಾಡಬೇಕು ಎಂದರು. ಶಿವಾಪೂರದ ಅಡವಿಸಿದ್ಧರಾಮ ಶ್ರೀಗಳು ದಿವ್ಯ ಸಾನಿಧ್ಯವಹಿಸಿದ್ದರು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರವಿ ತುಪ್ಪದ, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪವನ್ ಕತ್ತಿ ಹಾಗೂ ಶಿಲ್ಪಾ ಗೋಡಿಗೌಡರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ನಿಂಗಪ್ಪ ಫಿರೋಜಿ, ಭೀಮಪ್ಪ ಹಂದಿಗುಂದ, ಮಹೇಶ್ ಕೌಜಲಗಿ, ಈರಣ್ಣ ಕೊಣ್ಣೂರ, ಶ್ರೀಶೈಲ ಅಂಗಡಿ, ಮಲ್ಲಪ್ಪ ಅಂಗಡಿ, ಪಾಂಡುರಂಗ ಬಿರನಗಡ್ಡಿ, ಗುರು ಪಾಟೀಲ, ಮಹಾದೇವ ಲಂಗೊಟಿ ಸೇರಿದಂತೆ ಎಲ್ಲ ರೈತ ಸ್ವಾಭಿಮಾನಿ ಸಮಾವೇಶದ ಸಂಘಟಕರು ಹಾಗೂ ಗ್ರಾಮದ ರೈತರು ಮುಂತಾದವರು ಉಪಸ್ಥಿತರಿದ್ದರು. ವೆಂಕಪ್ಪ ಉದ್ದನವರ ನಿರೂಪಿಸಿ ವಂದಿಸಿದರು.


