ಮಾಸ್ಕೋ(ರಷ್ಯಾ): ಯುಕ್ರೇನ್ ಜೊತೆಗಿನ ಸಂಘರ್ಷಕ್ಕೆ ಯುದ್ಧಭೂಮಿಯಲ್ಲಿ ಪರಿಹಾರ ಸಾಧ್ಯವಿಲ್ಲ. ಬಾಂಬ್‌ಗಳು, ಬುಲೆಟ್‌ಗಳ ಮಧ್ಯೆ ಶಾಂತಿ ಪ್ರಯತ್ನಗಳು ಯಶಸ್ವಿಯಾಗಲಾರವು ಎಂದು ಪ್ರಧಾನಿ ನರೇಂದ್ರ ಮೋದಿ, ರಷ್ಯಾಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಶಾಂತಿ ಸಂದೇಶ ನೀಡಿದ್ದಾರೆ.
ರಷ್ಯಾ ಅಧ್ಯಕ್ಷರ ಅಧಿಕೃತ ನಿವಾಸ ‘ಕ್ರೆಮ್ಲಿನ್’ನಲ್ಲಿ ಮಂಗಳವಾರ ಪುಟಿನ್ ಜೊತೆಗಿನ ಮಾತುಕತೆಯ ಆರಂಭಿಕ ಭಾಷಣದಲ್ಲಿ ಮೋದಿ, ಉಕ್ರೇನ್ನ ಕೀವ್‌ನಲ್ಲಿರುವ ಮಕ್ಕಳ ಆಸ್ಪತ್ರೆಯ ಮೇಲೆ ಕ್ಷಿಪಣಿ ದಾಳಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಈ ಘಟನೆಯಲ್ಲಿ ಕನಿಷ್ಠ 38 ಜನರು ಸಾವನ್ನಪ್ಪಿದ್ದರು.
”ಯುದ್ಧ, ಯಾವುದೇ ಸಂಘರ್ಷ ಅಥವಾ ಭಯೋತ್ಪಾದಕ ಕೃತ್ಯಗಳನ್ನೇ ತೆಗೆದುಕೊಳ್ಳಿ. ಮಾನವೀಯತೆಯನ್ನು ನಂಬುವ ಯಾವುದೇ ವ್ಯಕ್ತಿಯೂ ಜನರು ಸತ್ತಾಗ ಮತ್ತು ವಿಶೇಷವಾಗಿ ಮುಗ್ಧ ಮಕ್ಕಳು ಸತ್ತಾಗ ನೋವು ಅನುಭವಿಸುತ್ತಾನೆ. ಇಂತಹ ನೋವನ್ನು ಅನುಭವಿಸಿದಾಗ ಹೃದಯ ಛಿದ್ರವಾಗುತ್ತದೆ. ನಿನ್ನೆ ನಿಮ್ಮೊಂದಿಗೆ ಈ ವಿಷಯಗಳ ಬಗ್ಗೆ ಮಾತನಾಡಲು ನನಗೆ ಅವಕಾಶ ಸಿಕ್ಕಿತು” ಎಂದು ಮೋದಿ ತಿಳಿಸಿದರು.