ಹಸಿರು ಕ್ರಾಂತಿ ವರದಿ
ಜಮಖಂಡಿ: ದುಡ್ಡು ಪಡೆದು ಮತ ಹಾಕಿದವರು ಅಭಿವೃದ್ಧಿ ಬಗ್ಗೆ ಕೇಳಲು ಹೇಗೆ ಸಾಧ್ಯ? ದುಡ್ಡಿನ ಆಸೆಗೆ ಮತ ಮಾರಾಟಗೈದ ಮತದಾರರು ಅಭಿವೃದ್ಧಿ ಕೇಳುವ ನೈತಿಕತೆಯನ್ನು ಕಳೆದುಕೊಂಡಿರುತ್ತಾರೆ. ನಾನು ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆದು ಕೆಲಸ ಮಾಡುವಂತೆ ಒತ್ತಾಯಿಸಬಹುದು ಅಷ್ಟೇ ಎಂದು ವಿಧಾನ ಪರಿಷತ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ನಗರದ ರಮಾನಿವಾಸ ಸಭಾಭವನದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೆಂಗಳೂರು, ಮೈಸೂರು, ಉಡುಪಿ ಮುಂತಾದ ಕ್ಷೇತ್ರಗಳಂತೆ ಉತ್ತರಕರ್ನಾಟಕದ ಜಿಲ್ಲೆಗಳು ಅಭಿವೃದ್ಧಿಯಾಗಬೇಕು. ಉತ್ತರ ಕರ್ನಾಟಕದಲ್ಲಿ ೯೬ ಜನ ಶಾಸಕರಿದ್ದರು ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲವೆಂಬ ದೂರುಗಳು ಕೇಳಿ ಬರುತ್ತವೆ. ದಕ್ಷಿಣ ಕನ್ನಡದ ಶಾಸಕರಂತೆ ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಸಮಯ ನೀಡಬೇಕು. ರಾಜಕೀಯ ಇಚ್ಛಾಶಕ್ತಿಯಿಂದ ಒತ್ತಡ ತರುವ ಮೂಲಕ ಸರ್ಕಾರದಿಂದ ಕೆಲಸ ಮಾಡಿಸಿಕೊಳ್ಳಬೇಕು ಅಭಿವೃದ್ದಿ ಅಭಿವೃದ್ಧಿ ಎಂದು ಜಪಿಸಿದರೇ ಆಗದು. ಉತ್ತರಕರ್ನಾಟಕ ಎಲ್ಲ ಶಾಸಕರು ಒಗ್ಗಟ್ಟಾಗಿ ಅಭಿವೃದ್ದಿಯ ಮಂತ್ರ ಜಪಿಸಿದರೇ ಎಲ್ಲ ಜಿಲ್ಲೆಗಳು ಅಭಿವೃದ್ಧಿಯತ್ತ ಸಾಗಲು ಸಾಧ್ಯ. ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಾಗಿ ಉತ್ತರಕರ್ನಾಟಕದ ಕೆಲಸಗಳಾಗುತ್ತಿಲ್ಲ. ಮತಕ್ಷೇತ್ರದ ರಾಜಕಾರಣಿಗಳು ತಮ್ಮ ಕ್ಷೇತ್ರಗಳ ಅಭಿವೃದ್ಧಿ ಬಗ್ಗೆ ಮುತುವರ್ಜಿ ವಹಿಸಬೇಕು ಎಂದರು.
ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಉಂಟಾಗಿದೆ. ಈ ಕುರಿತು ತಾವು ಹೋದ ಕಡೆ ದೂರುಗಳು ಕೇಳಿ ಬಂದಿವೆ. ಸರ್ಕಾರಕ್ಕೆ ಈ ಕುರಿತು ಶೀಘ್ರವಾಗಿ ಮಾತನಾಡುವ ಮೂಲಕ ಕೂಡಲೇ ಕ್ರಮ ಜರುಗಿಸುವಂತೆ ತಿಳಿಸುತ್ತೇನೆ. ಸ್ಥಳದಲ್ಲಿಯೇ ಹಿರಿಯ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ ಸಮಸ್ಯೆ ಕುರಿತು ಕ್ರಮ ಜರುಗಿಸುವಂತೆ ಆದೇಶಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ಕೇಂದ್ರಗಳಲ್ಲಿ ಶಾಲೆಗಳ ಪರಿಸ್ಥಿತಿ ತೀರಾ ಹದಗೆಟ್ಟಿದ್ದು ಸರ್ಕಾರಕ್ಕೆ ಮತ್ತು ಸದನದಲ್ಲಿ ಮಾಹಿತಿ ನೀಡಿದ್ದು, ಯಾವುದೇ ಕೆಲಸವಾಗುತ್ತಿಲ್ಲ ಎಂದು ಶಾಸಕ ಜಗದೀಶ ಗುಡಗುಂಟಿ ಸಭಾಪತಿಗಳ ಗಮನ ಸೆಳೆದರು
ಅದಕ್ಕೆ ಉತ್ತರಿಸಿದ ಅವರು ಸರ್ಕಾರ ಮುಳುಗಡೆ ಕೆಲಸವನ್ನು ಪೂರ್ಣಗೊಳಿಸಬೇಕು. ಸರ್ಕಾರ ಅನುದಾನ ನೀಡುತ್ತಿಲ್ಲ ಕೆಲಸಗಳಾಗುತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ಹಾಳಾಗಿದ್ದು ದುಡ್ಡಿಗಾಗಿ ಮತಗಳನ್ನು ಮಾರಿಕೊಂಡವರು ಚುನಾಯಿತ ಸದಸ್ಯರಿಂದ ಯಾವ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದರು. ಶಿಕ್ಷಕರ ಕೊರತೆ ಶಾಲಾ ಕಟ್ಟಡಗಳ ದುರಸ್ತಿ ಇನ್ನಿತರ ಕೆಲಸಗಳಾಗಬೇಕಿದೆ. ಅದಕ್ಕಾಗಿ ಸರ್ಕಾರದ ಗಮನ ಸೆಳೆಯುತ್ತೇನೆ ಎಂದರು.
ರಸ್ತೆಗಳ ಅಭಿವೃದ್ಧಿ, ದುರಸ್ತಿಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರದ ಗಮನಕ್ಕೆ ತರುತ್ತೇನೆ. ತಾವು ಶಿಕ್ಷಣ ಸಚಿವರಾಗಿದ್ದ ಸಂದರ್ಭದಲ್ಲಿ ಶಿಕ್ಷಕರ ನೇಮಕಾತಿ, ವರ್ಗಾವಣೆ ನೀತಿ ಸಹಿತ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಪ್ರಸಕ್ತ ಸಚಿವರಿಗೆ ಸಮಸ್ಯೆಗಳ ಮಾಹಿತಿ ನೀಡುವ ಕೆಲಸ ಮಾಡಲು ಮಾತ್ರ ನಮ್ಮಿಂದ ಸಾಧ್ಯ ಎಂದರು.
ಶಾಸಕ ಜಗದೀಶ ಗುಡಗುಂಟಿ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ತಹಸೀಲ್ದಾರ ಅನೀಲ ಬಡಿಗೇರ, ಪಿಎಸ್.ಐ ಅನೀಲ ಕುಂಬಾರ, ಸುರೇಶಗೌಡ ಪಾಟೀಲ, ಮುಲ್ಲು ದಾನಗೊಂಡ, ಮಹಾದೇವ ಇಟ್ಟಿ ಸಹಿತ ಹಲವರು ಇದ್ದರು.