ಶಿವಮೊಗ್ಗ, ಮೇ 30: ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡೆತ್ ನೋಟ್ನಲ್ಲಿ ನಿರ್ದಿಷ್ಟವಾಗಿ ಸಚಿವರ ಹೆಸರು ಬರೆದಿಲ್ಲ. ಹೀಗಾಗಿ ಸಚಿವರ ವಿರುದ್ದ ಕ್ರಮ ಕೈಗೊಳ್ಳಲು ಬರುವುದಿಲ್ಲ ಎಂದು ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಪ್ರಕರಣದಲ್ಲಿ ಅವರ ಹೆಸರು ಇತ್ತು. ಇಲ್ಲಿ ಸಚಿವರ ಹೆಸರಿಲ್ಲ. ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧವೂ ಕ್ರಮ ಆಗುತ್ತದೆ ಎಂದು ಹೇಳಿದ್ದಾರೆ.
ಎಲ್ಲಾ ಸಂಸ್ಥೆಗಳು ಸರ್ಕಾರದ ಅಧೀನದಲ್ಲೇ ಕೆಲಸ ಮಾಡೋದು. ಹೀಗಾಗಿ ತನಿಖಾ ಸಂಸ್ಥೆಗಳನ್ನು ಎಲ್ಲರೂ ನಂಬಬೇಕು. ಸಿಬಿಐ ಮೇಲೂ ಪ್ರಭಾವ ಬೀರಬಹುದು ಅಂತಾ ನಾನು ಹೇಳುತ್ತೇನೆ. ತನಿಖೆ ಸಿಬಿಐಗೆ ವಹಿಸಬೇಕಾ, ಬೇಡವಾ ಅಂತಾ ಸರ್ಕಾರ ನಿರ್ಧರಿಸುತ್ತೆ. ಬಿಜೆಪಿಯವರನ್ನು ಕೇಳಿ ನಾವು ಅಧಿಕಾರ ನಡೆಸಬೇಕಾ ಎಂದು ಕಿಡಿಕಾರಿದ್ದಾರೆ.