ಬೆಳಗಾವಿ.ಬೆಳಕಿನ ಕೆಲಸ ಕತ್ತಲೆಯನ್ನು ಹೊಡೆದೋಡಿಸುವುದು ಹಾಗೂ ಜ್ಞಾನದ ಕೆಲಸ ಅಜ್ಞಾನವನ್ನು ಹೊಡೆದೋಡಿಸುವುದು ಎಂದು ಇಟ್ನಾಳದ ಶ್ರೀ ಸಿದ್ದೇಶ್ವರ ಶರಣರು ಹೇಳಿದರು.
ಅವರು ಗುರ್ಲಾಪುರ ಗ್ರಾಮದ ಜನನಿ ಸಂಸ್ಥೆ ಹಾಗೂ ಶ್ರೀವಿದ್ಯಾ ನಿಧಿ ಕನ್ನಡ ಕಾನ್ವೆಂಟ್ ಶಾಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಶಿಶು ಸಂರಕ್ಷಣ ದಿನಾಚರಣೆಯ ನಿಮಿತ್ಯ ದೀಪೋತ್ಸವ ಮತ್ತು ಅಮ್ಮನ ಕೈತುತ್ತು ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡುತ್ತಾ ಹುಟ್ಟಿನಿಂದ ಸಾಯುವವರೆಗೂ ಜ್ಞಾನವನ್ನು ಬೆಳೆಸಿಕೊಳ್ಳುವುದು ಮನುಷ್ಯನ ಜೀವನದ ಆದ್ಯ ಕರ್ತವ್ಯ.
ಯಾವ ತಾಯಿಯು ಚಿಕ್ಕಂದಿನಿಂದ ಜ್ಞಾನವನ್ನು ಕೊಡುವುದಿಲ್ಲವೋ ಅವರು ಮಕ್ಕಳಿಗೆ ಶತ್ರುಗಳು ಇದ್ದಂತೆ. ಆದ್ದರಿಂದ ತಂದೆ ತಾಯಿ ಗಳು ಮಕ್ಕಳಿಗೆ ಒಳ್ಳೆಯ ಜ್ಞಾನವನ್ನು ಮಗುವಿನ ಹುಟ್ಟಿನಿಂದ ಬೆಳೆಸಿ ಕೊಡಬೇಕು ಎಂದರು.
ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎಂಬಂತೆ ಮಕ್ಕಳಿಗೆ ಚಿಕ್ಕಂದಿನಿಂದಾಗಲೇ ಒಳ್ಳೆಯ ಜ್ಞಾನವನ್ನು ಬೆಳೆಸಿಕೊಳ್ಳುವಂತೆ ನೋಡಿಕೊಳ್ಳಬೇಕು. ಆದ್ದರಿಂದ ಮಕ್ಕಳಿಗೆ ಜ್ಞಾನವು ಬಹಳ ಮುಖ್ಯವಾದದ್ದು. ಅಮ್ಮ ಅನ್ನುವ ಪದವು ಹೃದಯದಿಂದ ಬರುವಂತದ್ದು. ಒಂದು ತಕ್ಕಡಿಯಲ್ಲಿ ಭೂಮಿ, ಇನ್ನೊಂದು ತಕ್ಕಡಿಯಲ್ಲಿ ತಾಯಿಯನ್ನು ಇಟ್ಟು ತೂಗಿದರೆ ಅಮ್ಮನ ತೂಕ ಹೆಚ್ಚಿರುತ್ತದೆ. ಆದ್ದರಿಂದ ಅಮ್ಮನಿಗೆ ಸರಿಸಾಟಿಯಾಗುವುದು ಜಗತ್ತಿನಲ್ಲಿ ಯಾವುದು ಇಲ್ಲ. ಸ್ವಾಮಿ ವಿವೇಕಾನಂದರ ಮಾತಿನಂತೆ ಓ ಶೃತಿ ನೀನಿದ್ದರೆ ನಾ ಗೆದ್ದೆ ಎನ್ನುವಂತೆ ಶ್ರದ್ಧೆಯಿಂದ ಜ್ಞಾನವನ್ನು ಬೆಳೆಸಿಕೊಂಡರೆ ಅದ್ಭುತವಾದ ವ್ಯಕ್ತಿಯಾಗಿ ಬೆಳೆಯಬಹುದು ಎಂದು ಹೇಳಿದರು.
ಮುಖ್ಯ ಅತಿಥಿಗಳಾದ ರಾಧಾ ಎಂ ಎನ್ ಮಾತನಾಡುತ್ತಾ, ಎಲ್ಲರೂ ಬಯಸುವುದು ತಮ್ಮ ಮಕ್ಕಳು” ದ ಬೆಸ್ಟ್ “ಆಗಬೇಕೆಂದು, ಆದರೆ ಹೇಗೆ ಆಗಬೇಕು ಎನ್ನುವ ವೈಜ್ಞಾನಿಕ ಜ್ಞಾನ ಇರುವುದಿಲ್ಲ , ಮಗು ಹುಟ್ಟುವುದಕ್ಕಿಂತ ಮೊದಲು ದೇವರಲ್ಲಿ ಬೇಡಿಕೊಳ್ಳುವುದು, ಹರಕೆ ಹೊರುವುದು, ಪೂಜೆ ಮಾಡಿಸುವುದು ಮಾಡುತ್ತೇವೆ. ಆದರೆ ಮಗು ಹುಟ್ಟಿದ ಮೇಲೆ ಅದನ್ನು ಹೇಗೆ ಬೆಳೆಸಿಬೇಕು ಎನ್ನುವ ವೈಜ್ಞಾನಿಕ ತರಬೇತಿ ನಮಗೆ ಇರುವುದಿಲ್ಲ. ನಾಯಿ ಹೇಗೆ ಬೆಳೆಸಬೇಕು, ಬೆಳೆ ಹೇಗೆ ಬೆಳೆಸಬೇಕು, ಪ್ರಾಣಿಗಳನ್ನು ಹೇಗೆ ಸಾಕಬೇಕು ಎಂಬ ತರಬೇತಿಗಳನ್ನು ಪಡೆದುಕೊಳ್ಳುತ್ತೇವೆ. ಹಾಗೂ ನಮ್ಮ ಮಕ್ಕಳನ್ನು ಹೇಗೆ ಬೆಳೆಸಬೇಕು ಎನ್ನುವುದು ಜ್ಞಾನ ಇರುವುದಿಲ್ಲ. ಮಗು ಹುಟ್ಟಿದಾಗ ಅದರ ಮೆದುಳು ವಯಸ್ಕರ ಕಾಲು ಭಾಗ ಆಗಿರುತ್ತದೆ. ಮಗುವಿನಲ್ಲಿ ಅತ್ಯಂತ ವೇಗ ವಾಗಿ ಬೆಳೆಯುವ ಅಂಗವೆಂದರೆ ಅದು ಮೆದುಳು. ಒಂದು ವರ್ಷದಲ್ಲಿ 70% ಮೆದುಳು ಬೆಳವಣಿಗೆ ಯಾಗುತ್ತದೆ. ಹಾಗೂ ಮೂರನೇ ವರ್ಷದಲ್ಲಿ 10% ಮೆದುಳು ಬೆಳವಣಿಗೆ ಯಾಗುತ್ತದೆ. ಐದನೇ ವರ್ಷದಲ್ಲಿ 15% ಮೆದುಳು ಬೆಳವಣಿಗೆ ಆಗುತ್ತದೆ. 25 ನೇ ವಯಸ್ಸಿನಲ್ಲಿ 5% ಮೆದುಳು ಬೆಳವಣಿಗೆ ಆಗುತ್ತದೆ. ಹೀಗೆ 25 ವಯಸ್ಸಿನವರೆಗೆ ಮನುಷ್ಯನ ಮೆದುಳು 100% ಬೆಳವಣಿಗೆ ಆಗುತ್ತದೆ. ಆದರೆ ನಾವುಗಳು ಈ ವಯಸ್ಸಿನಲ್ಲಿ ಮೆದುಳಿನ ಬೆಳವಣಿಗೆಗೆ ಅವಶ್ಯವಿರುವುದನ್ನು ಬಿಟ್ಟು ಮಕ್ಕಳನ್ನು ಬೈಯುವುದು, ದಂಡಿಸುವುದು ಮಾಡುತ್ತೇವೆ. ಇದರಿಂದ ಮಕ್ಕಳ ಮೆದುಳಿನ ಬೆಳವಣಿಗೆ ಕುಂಠಿತವಾಗುತ್ತದೆ ಎಂದು ಮಾತನಾಡಿದರು.
ಅತಿಥಿಗಳಾದ ಎ ಜಿ ಶರಣಾರ್ಥಿ ಗುರುಗಳು ಮಾತನಾಡುತ್ತಾ ನಿಮ್ಮ ಮಕ್ಕಳಿಗೆ ಎಷ್ಟಾದರೂ ಆಸ್ತಿ ಮಾಡಬಹುದು, ಜ್ಞಾನದ ಆಸ್ತಿಯನ್ನು ಮಾಡುವುದು ಅಷ್ಟು ಸುಲಭವಲ್ಲ. ಮಕ್ಕಳಿಗೆ ಮಾಡಿದ ಆಸ್ತಿಯನ್ನು ಬಂಧು-ಬಳಗದವರು ಕಸಿದುಕೊಳ್ಳಬಹುದು. ಆದರೆ ಮಕ್ಕಳಲ್ಲಿ ವಿದ್ಯೆ ಮತ್ತು ಜ್ಞಾನದ ಆಸ್ತಿಯನ್ನು ಯಾರು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂಬ ಈ ಮಾತನ್ನು ಹೇಳಿದರು.
ಶಿವರುದ್ರಯ್ಯ ಹಿರೇಮಠ್ ಮಾತನಾಡಿ ಶಾಲೆಗಳು ತರಬೇತಿಗಳನ್ನು ನಡೆಸುವುದರೊಂದಿಗೆ ಈ ರೀತಿಯ ಕಾರ್ಯಕ್ರಮಗಳನ್ನು ನಡೆಸುವುದರಿಂದ ಮಕ್ಕಳಲ್ಲಿ ಮತ್ತು ಪಾಲಕರಲ್ಲಿ ಒಳ್ಳೆಯ ಬಾಂಧವ್ಯ ಬೆಳೆಯುವುದರಲ್ಲಿ ಸಹಾಯವಾಗುತ್ತದೆ. ಹೀಗೆ ವಿದ್ಯಾನಿಧಿ ಶಾಲೆಯು ಮೊದಲಿನಿಂದಲೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಪಾಲಕರಿಗೆ ಮತ್ತು ಮಕ್ಕಳಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗುತ್ತಾ ಬಂದಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮುಖ್ಯೋಪಾಧ್ಯಾಯರು ವಿಷ್ಣು ದೊಡ್ಡಮನಿ ಅವರು ಮಾತನಾಡಿ ಪಾಲಕರು ಈ ರೀತಿಯಾಗಿ ಭಾಗವಹಿಸುವುದರಿಂದ ಶಾಲೆಯಲ್ಲಿ ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಹಾಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸುರೇಶ್ ಬಿ ಪಾಟೀಲ, ಸಿಬ್ಬಂದಿಯವರಾದ ಪೂಜಾ ಮರಾಠೆ, ಪವಿತ್ರ ಹಿರೇಮಠ, ಸುರೇಖಾ ಸಾಲ್ಗುಡಿ, ದಾಕ್ಷಾಯಿಣಿ ಅಂಬಿಗೇರ, ಜಗದೀಶ ಹಿರೇಮಠ, ಸಚಿನ ಪಾಲಬಾವಿ, ಸುರೇಶ ನೇಮಗೌಡರ, ರವಿ ಮ್ಯಾಗಡೆ, ಶಶಿ ಮುಗುಳುಕೋಡ, ಅನಿತಾ ಸುಳ್ಳನವರ, ಸುನಿಲ ಗೌರಾಣಿ, ನಾಗೇಶ ಗೌರಾಣಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಮೊದಲು ಪಾಲಕ ಪೋಷಕರಿಗೆ ರಂಗೋಲಿ ಸ್ಪರ್ಧೆ ಹಾಗೂ ಇನ್ನಿತರ ಮನೋರಂಜನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಸಿಬ್ಬಂದಿಯಾದ ಸಂಗೀತ ಮುಧೋಳ ನಿರೂಪಿಸಿದರು, ಸಂಸ್ಥೆಯ ಅಧ್ಯಕ್ಷ ಆನಂದ್ ಸುಳ್ಳನವರ ಸ್ವಾಗತಿಸಿದರು, ಪ್ರಸನ್ನ ಕುಮಾರ್ ಹಿರೇಮಠ ವಂದಿಸಿದರು.