ಬೆಂಗಳೂರು (ನ.05): ಧರ್ಮಸ್ಥಳ ಗ್ರಾಮದಲ್ಲಿ ಅಕ್ರಮವಾಗಿ ಶವಗಳನ್ನ ಹೂತಿಡಲಾಗಿದೆ ಎನ್ನುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಎಸ್ಐಟಿ ಅಧಿಕಾರಿಗಳು ಇಂಚಿಂಚು ಮಾಹಿತಿ ಕಲೆ ಹಾಕಿ ವಿಚಾರಣೆ ನಡೆಸುತ್ತಿದ್ದಾರೆ. ತನಿಖೆ ಕೂಡ ಅಂತಿಮ ಹಂತ ತಲುಪಿದೆ ಎನ್ನುತ್ತಿರುವಾಗಲೇ ಕೆಲವು ಮಹತ್ವದ ಬೆಳವಣಿಗಳು ಕೂಡ ನಡೆಯುತ್ತಿದೆ. ಇದೀಗ ಎಸ್ಐಟಿಗೆ ಮಹಿಳಾ ಆಯೋಗ ಪತ್ರ ಬರೆಯುವ ಮೂಲಕ ಅಸಮಾಧಾನ ಹೊರ ಹಾಕಿದೆ.
ಎಸ್ಐಟಿಗೆ ಮಹಿಳಾ ಆಯೋಗದಿಂದ ಪತ್ರ: ಧರ್ಮಸ್ಥಳ ಕೇಸ್ ಕೇವಲ ಚಿನ್ನಯ್ಯನ ಹೇಳಿಕೆ, ಕಳೆಬರಹ ಉತ್ಖನನಕ್ಕೆ ಸೀಮಿತವಾಗಿದೆ ಎಂದು ರಾಜ್ಯ ಮಹಿಳಾ ಆಯೋಗ ಅಸಮಾಧಾನ ಹೊರ ಹಾಕಿದೆ. ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗಿರುವ ಅತ್ಯಾಚಾರ, ಕೊಲೆ ಪ್ರಕರಣಗಳ ಹಾಗೂ ಅಸಹಜ ಮತ್ತು ಅನುಮಾನಾಸ್ಪದ ಸಾವು ಪ್ರಕರಣಗಳ ಬಗ್ಗೆಯೂ ಸಮಗ್ರವಾಗಿ ತನಿಖೆ ನಡೆಸಬೇಕು ಎಂದು ರಾಜ್ಯ ಮಹಿಳಾ ಆಯೋಗವು ಎಸ್‍ಐಟಿ ಮುಖ್ಯಸ್ಥರಿಗೆ ಪತ್ರ ಬರೆದಿದೆ.
ಸಾವುಗಳ ಬಗ್ಗೆ ನಡೆದಿಲ್ಲ ತನಿಖೆ: ಧರ್ಮಸ್ಥಳದ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆಯ ವ್ಯಾಪ್ತಿ ಬಗ್ಗೆ ಮಹಿಳಾ ಆಯೋಗ ಅಸಮಾಧಾನ ಹೊರಹಾಕಿದೆ. ಮಹಿಳೆಯರ ಅಸಹಜ ಸಾವು, ಅತ್ಯಾಚಾರ ಪ್ರಕರಣದ ಸಮಗ್ರ ತನಿಖೆ ನಡೆಸಿಲ್ಲ. ಜೊತೆಗೆ ಕಳೆದ 20 ವರ್ಷಗಳ ಅಸಹಜ ಸಾವಿನ ತನಿಖೆ ನಡೆಸಬೇಕು ಎಂದು ಪತ್ರದ ಮೂಲಕ ಮಹಿಳಾ ಆಯೋಗ ಆಗ್ರಹಿಸಿದೆ.


