ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಿಂದಿಸಿದ್ದ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಆರೋಪದ ಮೇಲೆ ಮೈಸೂರು ಕೇಂದ್ರ ಕಾರಾಗೃಹದ ವಾರ್ಡನ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು ಜೈಲು ಅಧಿಕಾರಿ ತಿಳಿಸಿದ್ದಾರೆ.
ಮಾಜಿ ಸೇನಾಧಿಕಾರಿ 45 ವರ್ಷದ ಎಚ್.ಎನ್ ಮಧುಕುಮಾರ್ ಅಮಾನತುಗೊಂಡಿದ್ದು ಕಳೆದ ನಾಲ್ಕು ವರ್ಷಗಳಿಂದ ಕಾರಾಗೃಹ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮಧುಕುಮಾರ್ ನಿವಾಸದಲ್ಲಿ ರೆಕಾರ್ಡ್ ಮಾಡಲಾದ ವೀಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಏಪ್ರಿಲ್ 28ರಂದು ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮದ ಸಂದರ್ಭದಲ್ಲಿ ವೇದಿಕೆಯಲ್ಲಿ ಪೊಲೀಸ್ ಅಧಿಕಾರಿಯ ಮೇಲೆ ಕೈ ಎತ್ತಿದ್ದನ್ನು ಕುಮಾರ್ ಖಂಡಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ವಿಷಯ ಬೆಳಕಿಗೆ ಬಂದ ತಕ್ಷಣ ನಿನ್ನ ಸಂಜೆ ವಾರ್ಡನ್ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ ಎಂದು ಮೈಸೂರು ಕೇಂದ್ರ ಕಾರಾಗೃಹದ ಅಧೀಕ್ಷಕ ಬಿ.ಎಸ್. ರಮೇಶ್ ತಿಳಿಸಿದ್ದಾರೆ.
ಏಪ್ರಿಲ್ 28ರಂದು ರೆಕಾರ್ಡ್ ಮಾಡಲಾದ ಈ ವಿಡಿಯೋದಲ್ಲಿ, ಕುಮಾರ್ ಮುಖ್ಯಮಂತ್ರಿಯನ್ನು ಹಲವಾರು ವಿಷಯಗಳ ಬಗ್ಗೆ ಟೀಕಿಸಿದರು. ಸಿದ್ದರಾಮಯ್ಯ ಅವರ ಪತ್ನಿ ಭಾಗಿಯಾಗಿದ್ದಾರೆ ಎನ್ನಲಾದ ಮುಡಾ ಹಗರಣವನ್ನು ಎತ್ತಿ ತೋರಿಸಿದರು. ಸಿಎಂ ತವರು ಜಿಲ್ಲೆ ಮೈಸೂರಿನಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಹೇಳಿದ್ದರು.