ವಿಶ್ವಕರ್ಮ ಸಮುದಾಯವು ಕರಕುಶಲತೆಗೆ ಆಧಾರ ಸ್ತಂಭವಾಗಿದೆ: ಮಹಾಪೌರ ಜ್ಯೋತಿ ಪಾಟೀಲ

Ravi Talawar
ವಿಶ್ವಕರ್ಮ ಸಮುದಾಯವು ಕರಕುಶಲತೆಗೆ ಆಧಾರ ಸ್ತಂಭವಾಗಿದೆ: ಮಹಾಪೌರ ಜ್ಯೋತಿ ಪಾಟೀಲ
WhatsApp Group Join Now
Telegram Group Join Now
ಧಾರವಾಡ : ವಿಶ್ವಕರ್ಮ ಸಮುದಾಯವು ಭಾರತೀಯ ಸಂಸ್ಕøತಿ ಮತ್ತು ಕರಕುಶಲತೆಗೆ ಆಧಾರ ಸ್ತಂಭವಾಗಿದೆ. ಶಿಲ್ಪಕಲೆ, ವಾಸ್ತುಶಿಲ್ಪ ಮತ್ತು ಮರಗೆಲಸ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅವರ ಕೌಶಲ್ಯ ಮತ್ತು ಪರಿಣತಿಯು ಅನನ್ಯವಾದದ್ದು ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಹಾಪೌರರಾದ ಜ್ಯೋತಿ ಪಾಟೀಲ ಅವರು ಹೇಳಿದರು.
 ನಗರದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ಸಭಾಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ ಭಗವಾನ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ನಮ್ಮ ಸುತ್ತಮುತ್ತ ನಾವು ಕಾಣುವ ಅನೇಕ ಅದ್ಭುತ ಕಲಾಕೃತಿಗಳ ಹಿಂದೆ ವಿಶ್ವಕರ್ಮರ ಶ್ರಮ ಮತ್ತು ಕೌಶಲ್ಯ ಅಡಗಿದೆ. ಆಧುನಿಕ ಯುಗದಲ್ಲಿಯೂ ವಿಶ್ವಕರ್ಮ ಸಮುದಾಯವು ತಮ್ಮ ಸಾಂಪ್ರದಾಯಿಕ ಕೌಶಲ್ಯಗಳನ್ನು ಉಳಿಸಿಕೊಂಡು ಬಂದಿದೆ. ಜೊತೆಗೆ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಸಮಕಾಲೀನ ಸಮಾಜದ ಬೇಡಿಕೆಗಳಿಗೆ ಅನುಗುಣವಾಗಿ ತಮ್ಮ ವೃತ್ತಿಗಳನ್ನು ಮುಂದುವರೆಸುತ್ತಿದ್ದಾರೆ ಎಂದು ಹೇಳಿದರು.
ಸಮಾಜದಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಅವರ ಕೌಶಲ್ಯ ಮತ್ತು ಜ್ಞಾನವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಎಲ್ಲರೂ ಬಡಗಿಯರ ಕಲೆಯ ಮೇಲೆ ಅವಲಂಬಿತರಾಗಿದ್ದಾರೆ. ಕೇವಲ ಮರದಿಂದ ವಸ್ತುಗಳನ್ನು ತಯಾರಿಸುವುದಿಲ್ಲ, ಬದಲಾಗಿ ಪ್ರತಿಯೊಬ್ಬರು ಮನೆ ಕಟ್ಟುವ ಕನಸುಗಳನ್ನು ನನಸಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರ ಕೌಶಲ್ಯ, ಶ್ರಮ ಮತ್ತು ಸೃಜನಶೀಲತೆ ಸಮಾಜಕ್ಕೆ ನೀಡುವ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು.
ವೇದಗಳಲ್ಲಿ ಮತ್ತು ಪುರಾಣಗಳಲ್ಲಿ ವಿಶ್ವಕರ್ಮರು ಸೃಷ್ಟಿಯ ರೂವಾರಿಗಳೆಂದು ಉಲ್ಲೇಖವಾಗಿದೆ. ದೇವತೆಗಳ ಅರಮನೆಗಳು, ಆಯುಧಗಳು ಮತ್ತು ವಿವಿಧ ನಿರ್ಮಾಣಗಳ ಶಿಲ್ಪಿ ಎಂದು ಉಲ್ಲೇಖಿಸಿರುವುದನ್ನು ವಿವರಿಸಿದರು. ದ್ವಾರಕಾ ನಗರ ನಿರ್ಮಾಣ, ಇಂದ್ರನ ವಜ್ರಾಯುಧ ಸೃಷ್ಟಿ, ಲಂಕೆಯ ನಿರ್ಮಾಣದಂತಹ ಅದ್ಭುತ ಕೃತಿಗಳಿಗೆ ವಿಶ್ವಕರ್ಮರೇ ಕಾರಣ ಎಂದು ಅವರು ಉದಾಹರಿಸಿದರು. ಇಂದಿನ ಆಧುನಿಕ ಎಂಜಿನಿಯರಿಂಗ್‍ಗೆ ಅಡಿಪಾಯ ಹಾಕಿದವರು ಭಗವಾನ್ ವಿಶ್ವಕರ್ಮರು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಮಾತನಾಡಿ, ಪೂರ್ವಜರು ಕೈಯಿಂದ ಮಾಡಿದ ಕಲೆಗಳು, ಅಂದರೆ ಕರಕುಶಲ ವಸ್ತುಗಳು, ಸಾಂಪ್ರದಾಯಿಕ ಚಿತ್ರಕಲೆಗಳು, ಶಿಲ್ಪಕಲೆಗಳು ಇತ್ಯಾದಿಗಳು ಶತಮಾನಗಳ ಕಾಲ ಉಳಿದು ತಮ್ಮದೇ ಆದ ಮಹತ್ವವನ್ನು ಉಳಿಸಿಕೊಂಡಿವೆ ಎಂದು ಅವರು ಹೇಳಿದರು.
ಕರಕುಶಲ ಕಲೆಗಳು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಭಾಗವಾಗಿವೆ. ಪ್ರತಿಯೊಂದು ಕೈಯಿಂದ ಮಾಡಿದ ವಸ್ತುವು ಅದರ ಸೃಷ್ಟಿಕರ್ತನ ಕೌಶಲ್ಯ, ಶ್ರಮ ಮತ್ತು ಕಥೆಯನ್ನು ಹೇಳುತ್ತದೆ. ಇವುಗಳು ಕೇವಲ ವಸ್ತುಗಳಲ್ಲ, ಬದಲಿಗೆ ನಮ್ಮ ಇತಿಹಾಸ ಮತ್ತು ಭಾವನೆಗಳನ್ನು ಒಳಗೊಂಡಿರುತ್ತವೆ ಎಂದು ತಿಳಿಸಿದರು.
ಕುಲಕಸುಬುಗಳು ಕೇವಲ ಆರ್ಥಿಕ ಮೂಲವಲ್ಲ, ಅವು ನಮ್ಮ ಗುರುತು ಮತ್ತು ಹೆಮ್ಮೆ. ಈ ಕಲೆಗಳನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಧಾರವಾಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಗುರುನಾಥ ಕೆ. ಬಡಿಗೇರ ಅವರು ವಿಶೇಷ ಉಪನ್ಯಾಸ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಅವರು ಸ್ವಾಗತಿಸಿದರು.  ಮಾಜಿ ಶಾಸಕಿ ಸೀಮಾ ಮಸೂತಿ ಅವರು ಮಾತನಾಡಿದರು.
ವೇದಿಕೆಯಲ್ಲಿ ಶ್ರೀ ಮೌನೇಶ್ವರ ಧರ್ಮನಿಧಿ ಸಂಸ್ಥೆ ಟ್ರಸ್ಟ್‍ನ ಅಧ್ಯಕ್ಷ ಮಹಾರುದ್ರ. ಬ. ಬಡಿಗೇರ, ವಿಶ್ವಕರ್ಮ ಮಹಾ ಒಕ್ಕೂಟದ ವಿಭಾಗೀಯ ಅಧ್ಯಕ್ಷ ನಿರಂಜನ ಎನ್.ಬಡಿಗೇರ, ಜಿಲ್ಲಾ ಅಧ್ಯಕ್ಷ ಸಂತೋಷ ಬಡಿಗೇರ, ವಿಶ್ವಕರ್ಮ ಮಹಾಸಭಾ ಜಿಲ್ಲಾಧ್ಯಕ್ಷ ಕಾಳಪ್ಪ ಬಡಿಗೇರ, ವಿಶ್ವಕರ್ಮ ನೌಕರರ ಸಂಘದ ಅಧ್ಯಕ್ಷ ವಿಠ್ಠಲ ಕಮ್ಮಾರ ಹಾಗೂ ಸಮಾಜದ ಮುಖಂಡರಾದ ವಸಂತ ಅರ್ಕಾಚಾರ್, ಭಾಸ್ಕರ್ ಬಡಿಗೇರ, ಸುಮಿತ್ರಾ ಬಡಿಗೇರ ಇದ್ದರು.
ಅಶ್ವಿನಿ ಎನ್. ಪತ್ತಾರ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ರವಿ ಕುಲಕರ್ಣಿ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಸಾಧಕರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರು ಹಾಗೂ ವಿಶ್ವಕರ್ಮ ಸಮಾಜದವರೂ, ಸಾರ್ವಜನಿಕರು ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article