ಬೆಂಗಳೂರು, ಡಿಸೆಂಬರ್ 3: ಇತ್ತೀಚೆಗಷ್ಟೇ ಹನಿಟ್ರ್ಯಾಪ್, ಜಾತಿನಿಂದನೆ ಕೇಸ್ನಲ್ಲಿ ಜೈಲು ಮೆಟ್ಟಿಲುಹತ್ತಿದ್ದ ಆರ್ಆರ್ ನಗರ ಶಾಸಕ ಮುನಿರತ್ನ ವಿರುದ್ಧ ಇದೀಗ ಮತ್ತೊಂದು ಆರೋಪ ಕೇಳಿಬಂದಿದೆ. ಬಿಬಿಎಂಪಿಯ ಮಾಜಿ ಕಾರ್ಪೋರೇಟರ್ ಹಾಗೂ ಅವರು ಪತಿ ಮುನಿರತ್ನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಸದ್ಯ ಮುನಿರತ್ನ ವಿರುದ್ಧ ದೂರು ದಾಖಲಿಸಿರುವ ದಂಪತಿ ಇದೀಗ ಎಸ್ಐಟಿ ಮುಂದೆ ದಾಖಲೆಗಳನ್ನು ಸಲ್ಲಿಸಲು ಸಜ್ಜಾಗಿದ್ದಾರೆ. ಮುನಿರತ್ನ ವಿರುದ್ಧ ಹನಿಟ್ರ್ಯಾಪ್, ಕೊಲೆ ಯತ್ನದ ಆರೋಪ ಮಾಡಿರುವ ಮಾಜಿ ಕಾರ್ಪೋರೇಟರ್, ವಿಡಿಯೋ ಕೂಡ ಬಿಡುಗಡೆ ಮಾಡಿರುವುದು ಚರ್ಚೆ ಹುಟ್ಟುಹಾಕಿದೆ.
ಶಾಸಕ ಮುನಿರತ್ನ ನಾಯ್ಡು ವಿರುದ್ಧ ಲಗ್ಗೆರೆಯ ಮಾಜಿ ಕಾರ್ಪೋರೇಟರ್ ಹಾಗೂ ಅವರ ಪತಿ ಗಂಭೀರ ಆರೋಪ ಮಾಡಿದ್ದಾರೆ. ಖಾಸಗಿ ಹೊಟೇಲ್ ಒಂದರಲ್ಲಿ ಸುದ್ದಿಗೊಷ್ಠಿ ನಡೆಸಿದ ಅವರು, ಮುನಿರತ್ನ ತಮ್ಮ ಕುಟುಂಬಕ್ಕೆ ನೀಡಿರುವ ಕಿರುಕುಳದ ಬಗ್ಗೆ ಸಾಕ್ಷಿ ಸಮೇತ ಅಳಲು ತೋಡಿಕೊಂಡಿದ್ದಾರೆ.