ತುಮಕೂರು ರಾಜಸ್ವ ನಿರೀಕ್ಷಕ ಎರಡನೇ ಬಾರಿಗೆ ಲೋಕಾ ಬಲೆಗೆ!

Ravi Talawar
ತುಮಕೂರು ರಾಜಸ್ವ ನಿರೀಕ್ಷಕ ಎರಡನೇ ಬಾರಿಗೆ ಲೋಕಾ ಬಲೆಗೆ!
WhatsApp Group Join Now
Telegram Group Join Now

ತುಮಕೂರು,16: ಜಮೀನು ಖಾತೆ ಮತ್ತು ಪಹಣಿಗಳನ್ನು ತಂದೆಯ ಹೆಸರಿನಿಂದ ಮಗನ ಹೆಸರಿಗೆ ವರ್ಗಾವಣೆ ಮಾಡಿಕೊಡಲು 10 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದ ಸಿ.ಎಸ್.ಪುರ ಹೋಬಳಿ ರಾಜಸ್ವ ನಿರೀಕ್ಷಕರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕೆ.ನರಸಿಂಹಮೂರ್ತಿ ಎಂಬುವರೇ ಲೋಕಾಯುಕ್ತರ ಬಲೆಗೆ ಬಿದ್ದ ಅಧಿಕಾರಿ. ಇವರು ಈ ಹಿಂದೆಯೂ ಒಮ್ಮೆ ಲಂಚ ಪಡೆಯುತ್ತಿರುವಾಗ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದರು.

ತುಮಕೂರಿನ ಗುಬ್ಬಿ ತಾಲೂಕಿನ ಸಿ.ಎಸ್.ಪುರ ಹೋಬಳಿಯ ಗದ್ದೆಹಳ್ಳಿ ನಾಗರಾಜು ಎಂಬುವರು ತಮ್ಮ ತಂದೆ ಚಿಕ್ಕಯಲ್ಲಯ್ಯ ಅವರ ಹೆಸರಿನಲ್ಲಿದ್ದ ಜಮೀನನ್ನು ತಾಲೂಕು ಸಬ್‌ ರಿಜಿಸ್ಟ್ರಾರ್ ಕಚೇರಿಯಲ್ಲಿ ಹಕ್ಕು ಖುಲಾಸೆ ಪತ್ರದ ಮೂಲಕ ತಮಗೆ ನೋಂದಣಿ ಮಾಡಿಕೊಂಡಿದ್ದರು. ಬಳಿಕ ಈ ಜಮೀನಿನ ಖಾತೆ ಮತ್ತು ಪಹಣಿಗಳನ್ನು ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳಲು ಮುಂದಾಗಿದ್ದರು. ಆದರೆ, ಖಾತೆ ಮತ್ತು ಪಹಣಿ ವರ್ಗಾವಣೆಗೆ ರಾಜಸ್ವ ನಿರೀಕ್ಷಕ ಕೆ.ನರಸಿಂಹಮೂರ್ತಿ ಅವರು 10 ಸಾವಿರ ರೂ. ಲಂಚ ಕೇಳಿದ್ದರು. ಈ ಹಣವನ್ನು ಸ್ವೀಕರಿಸುವ ವೇಳೆ ಕೆ.ನರಸಿಂಹಮೂರ್ತಿ ಸಿಕ್ಕಿಬಿದ್ದಿದ್ದಾರೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆಯೂ ಸಿಕ್ಕಿಬಿದ್ದಿದ್ದ ಅಧಿಕಾರಿ: ಕೆ.ನರಸಿಂಹಮೂರ್ತಿ ಈ ಹಿಂದೆ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ರಾಜಸ್ವ ನಿರೀಕ್ಷಕನಾಗಿ ಕರ್ತವ್ಯ ನಿರ್ವಹಿಸುವಾಗ ತುಮಕೂರು ನಗರದಲ್ಲಿನ ನಿವೇಶನವನ್ನು ಫಯಾಜ್​ ಎಂಬುವರ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಡಲು 15 ಸಾವಿರ ರೂ. ಲಂಚ ಕೇಳಿದ್ದರು. ಈ ಸಂಬಂಧ ಜುಲೈ 7, 2023ರಂದು ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾರ್ಯಾಚರಣೆಯಲ್ಲಿ ತುಮಕೂರು ಲೋಕಾಯುಕ್ತ ಕಚೇರಿಯ ಪೊಲೀಸ್ ಅಧೀಕ್ಷಕ ವಲಿಬಾಷಾ, ಪೊಲೀಸ್ ಉಪಾಧೀಕ್ಷಕ ಬಿ.ಉಮಾಶಂಕರ್, ಪೊಲೀಸ್‌ ಇನ್ಸ್‌ಪೆಕ್ಟರ್‌ಗಳಾದ ಸುರೇಶ್ ಕೆ. ಹಾಗೂ ಬಿ.ಮೊಹಮ್ಮದ್ ಭಾಗವಹಿಸಿದ್ದರು.

WhatsApp Group Join Now
Telegram Group Join Now
Share This Article