ಬೆಂಗಳೂರು: ಲಕ್ಷ್ಮೀಪತಿ ಬಾಲಾಜಿ ನಿರ್ಮಿಸಿ, ನಾಯಕನಾಗಿ ನಟಿಸಿರುವ ಎರಡನೇ ಚಿತ್ರ “ಮಾವುತ” ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನೆರವೇರಿತು.
ಶಂಕರ್ ಬಿ ಡಿ.ಸಿ.ಪಿ(ದೆಹಲಿ), ಬಿ.ಜೆ.ಪಿ ಮುಖಂಡರಾದ ಕವಿತಾ ಸಿಂಗ್, ನಿವೃತ್ತ ಪೊಲೀಸ್ ಅಧಿಕಾರಿ ನಂಜುಂಡಸ್ವಾಮಿ, ಸಮಾಜ ಸೇವಕರಾದ ಭಜರಂಗಿ ಉಮೇಶ್ ಮುಂತಾದವರು ಅತಿಥಿಗಳಾಗಿ ಆಗಮಿಸಿದ್ದರು.”ಮಾವುತ”, ಕಾಡಿನಲ್ಲಿ ನಡೆಯುವ ಕೆಲವು ಅಕ್ರಮಗಳನ್ನು ಕಂಡು ಹಿಡಿದು ಕಾಡನ್ನು ಉಳಿಸಿಕೊಳ್ಳುವ “ಮಾವುತ” ಹಾಗೂ ಆನೆಯ ಕಥೆ. ಲಕ್ಷ್ಮೀಪತಿ ಬಾಲಾಜಿ ಅವರು ಈ ಚಿತ್ರವನ್ನು ನಿರ್ಮಾಣ ಮಾಡುವುದರ ಜೊತೆಗೆ ನಾಯಕನಾಗಿಯೂ ನಟಿಸಿದ್ದಾರೆ. ಎಂದು ನಿರ್ದೇಶಕ ರವಿಶಂಕರ್ ನಾಗ್ ತಿಳಿಸಿದರು.
ಈ ಹಿಂದೆ “ಬರಿ ಟೆನ್ ಪಸೆಂಟ್ ಬಡ್ಡಿ” ಎಂಬ ಚಿತ್ರ ನಿರ್ಮಿಸಿ, ನಾಯಕನಾಗಿ ನಟಿಸಿದ್ದ ನನಗೆ “ಮಾವುತ” ಎರಡನೇ ಚಿತ್ರ. ಇದೊಂದು ಕಾಡಿನ ಕಥಾಹಂದರದ ಚಿತ್ರ. ಸಾಗರ್ ಎಂಬ ಆನೆ ಚಿತ್ರದಲ್ಲಿ ಅಮೋಘವಾಗಿ ಅಭಿನಯಿಸಿದೆ. ಅನೇಕ ಬಾರಿ ಅಂಬಾರಿ ಹೊತ್ತು, ಈಗ ನಮ್ಮೊಡನೆ ಇರದ ಅರ್ಜುನನೇ ಸ್ಫೂರ್ತಿ. ನಮ್ಮ ಈ ಚಿತ್ರ ಅರ್ಜುನನಿಗೆ ಅರ್ಪಣೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ ಎಂದರು ನಾಯಕ ಹಾಗೂ ನಿರ್ಮಾಪಕ ಲಕ್ಷ್ಮೀಪತಿ ಬಾಲಾಜಿ. ಚಿತ್ರದಲ್ಲಿ ಐದು ಸಾಹಸ ಸನ್ನಿವೇಶಗಳಿವೆ. ಸಾಹಸ ಸಂಯೋಜನೆಯ ಜೊತೆಗೆ ಪ್ರಮುಖಪಾತ್ರದಲ್ಲಿ ಅಭಿನಯ ಕೂಡ ಮಾಡಿದ್ದೇನೆ ಎಂದು ಥ್ರಿಲ್ಲರ್ ಮಂಜು ತಿಳಿಸಿದರು. ನಾಯಕಿಯರಾದ ಮಹಾಲಕ್ಷ್ಮಿ, ದಿವ್ಯಶ್ರೀ, ನಟರಾದ ಲಯಕೋಕಿಲ, ಕೈಲಾಶ್ ಕುಟ್ಟಪ್ಪ, ಹಿನ್ನೆಲೆ ಸಂಗೀತ ನೀಡಿರುವ ರವಿವರ್ಮ ಹಾಗೂ ಸಿರಿ ಮ್ಯೂಸಿಕ್ನ ಚಿಕ್ಕಣ್ಣ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.
ಸಹನಿರ್ಮಾಪಕರಾಗಿ ಮುರುಳಿಧರ ತಿಪ್ಪುರ್, ಚಲುವರಾಜ್ ಎನ್ ಅವರು ಸಾಥ್ ಕೊಟ್ಟಿದ್ದಾರೆ. ರವಿಶಂಕರನಾಗ್ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾ?ಣೆ, ಸಾಹಿತ್ಯ ಬರೆದು ನಿರ್ದೇಶನ ಹೊಣೆ ಹೊತ್ತಿದ್ದಾರೆ. ಛಾಯಾಗ್ರಹಣ ವೀನಸ್ ಮೂರ್ತಿ, ವಿನು ಮನಸು ಸಂಗೀತ , ರವಿವರ್ಮ ಹಿನ್ನೆಲೆ ಸಂಗೀತ , ವೆಂಕಿ ಯುಡಿವಿ ಸಂಕಲನ, ಕಮಲ್ ಗೋಯಲ್ ಡಿಐ ,ಅಕ್ಷಯ್ ಅವರ ಸಿಜಿ ಕಾರ್ಯ ,ಥ್ರಿಲ್ಲರ್ ಮಂಜು ಸಾಹಸ, ಪಿಆರ್ ಓ ಸುಧೀಂದ್ರ ವೆಂಕಟೇಶ, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ ಅವರಾಗಿದ್ದಾರೆ. ಚಿತ್ರದ ತಾರಾಬಳಗದಲ್ಲಿ ಲಕ್ಷ್ಮೀಪತಿ ಬಾಲಾಜಿ, ಮಹಾಲಕ್ಷ್ಮಿ, ದಿವ್ಯಶ್ರೀ, ಥ್ರಿಲರ್ಮಂಜು, ಪದ್ಮವಾಸಂತಿ, ಬಲರಾಜ್ವಾಡಿ ,ಲಯ ಕೋಕಿಲ, ನಂಜುಸಿದ್ದಪ್ಪ, ಕೈಲಾಶ್ಕುಟ್ಟಪ್ಪ, ಮೈಸೂರ್ಸುಂದರ್, ಮೈಸೂರ್ಮಂಜುಳ ಮೊದಲಾದವರು ಅಭಿನಯಿಸಿದ್ದಾರೆ.
“ಮಾವುತ” ಚಿತ್ರದ ಟ್ರೈಲರ್ ಬಿಡುಗಡೆ


