ನವದೆಹಲಿ, ಏಪ್ರಿಲ್ 26: ಪಶ್ಚಿಮ ಬಂಗಾಳದ ಸಂದೇಶ್ಖಾಲಿ ಪ್ರದೇಶದಲ್ಲಿ ಲೈಂಗಿಕ ಹಲ್ಲೆ ಮತ್ತು ಭೂಕಬಳಿಕೆ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ವಹಿಸಿದ ಕಲ್ಕತ್ತಾ ಹೈಕೋರ್ಟ್ ನಿರ್ಧಾರವನ್ನು ಪ್ರಶ್ನಿಸಿ ತೃಣಮೂಲ ಕಾಂಗ್ರೆಸ್ ಪಕ್ಷ ನೇತೃತ್ವದ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.
ಏಪ್ರಿಲ್ 29 ಸೋಮವಾರದಂದು ನ್ಯಾಯಮೂರ್ತಿಗಳಾದ ಬಿಆರ್ ಗವಾಯ್ ಮತ್ತು ಸಂದೀಪ್ ಮೆಹ್ತಾ ಅವರಿರುವ ಸುಪ್ರೀಂ ನ್ಯಾಯಪೀಠ ಈ ಅರ್ಜಿಯ ವಿಚಾರಣೆ ನಡೆಸಲಿದೆ. ಸಂದೇಶ್ಖಾಲಿ ಪ್ರಕರಣದಲ್ಲಿ ಮಾಡಲಾಗಿರುವ ಆರೋಪಗಳ ಹಿಂದೆ ರಾಜಕೀಯ ಸಂಚು ಇರುವುದನ್ನು ಗುರುತಿಸಲು ಉಚ್ಚ ನ್ಯಾಯಾಲಯ ವಿಫಲವಾಗಿದೆ.
ಈ ಪ್ರಕರಣದಲ್ಲಿ ರಾಜ್ಯ ಪೊಲೀಸ್ ಬಹಳಷ್ಟು ಕ್ರಮಗಳನ್ನು ಕೈಗೊಂಡಿರುವ ಸಂಗತಿಯನ್ನೂ ಕೋರ್ಟ್ ಅಲಕ್ಷಿಸಿದೆ. ಸಿಬಿಐಗೆ ತನಿಖೆಯನ್ನು ವರ್ಗಾಯಿಸಿರುವುದು ಕಾನೂನಿಗೆ ವಿರುದ್ಧವಾಗಿದೆ ಎಂಬುದು ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ವಾದವಾಗಿದೆ.
ಅಷ್ಟೇ ಅಲ್ಲ, ಸಂದೇಶ್ಖಾಲಿ ಪ್ರಕರಣದಲ್ಲಿ ತನಿಖೆಯ ವರದಿಯನ್ನು ನ್ಯಾಯಾಲಯವು ಸಿಬಿಐ ಬಳಿ ಕೇಳಿದೆ. ಇದರಿಂದ ಇಡೀ ರಾಜ್ಯದ ಆಡಳಿತ ವ್ಯವಸ್ಥೆಯ ಬಗ್ಗೆ ಅನುಮಾನ ಹುಟ್ಟಿಸುವಂತೆ ಮಾಡುತ್ತದೆ ಎಂದು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ಗೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದೆ.
ಕಲ್ಕತ್ತಾ ಹೈಕೋರ್ಟ್ ಏಪ್ರಿಲ್ 10ರಂದು ನ್ಯಾಯಾಲಯ ಕಣ್ಗಾವಲಿನಲ್ಲಿ ತನಿಖೆ ನಡೆಸಬೇಕು ಎಂದು ಸಿಬಿಐಗೆ ಸೂಚಿಸಿತ್ತು. ಸಂದೇಶ್ಖಾಲಿಯಲ್ಲಿ ಭೂಕಬಳಿಕೆ ಮತ್ತು ಮಹಿಳೆಯರ ಮೇಲೆ ದೌರ್ಜನ್ಯವಾಗಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ನಿಷ್ಪಕ್ಷಪಾತಿ ತನಿಖೆ ನಡೆಸಬೇಕಾದ ಅವಶ್ಯಕತೆ ಇದೆ ಎಂದಿತ್ತು ಹೈಕೋರ್ಟ್.
ಹಾಗೆಯೇ, ಸಂದೇಶ್ಖಾಲಿಯಲ್ಲಿ ಮೀನು ಸಾಕಾಣಿಕೆಗೆ ಕೊಳ ನಿರ್ಮಿಸಲು ಅಕ್ರಮವಾಗಿ ಕೃಷಿ ಭೂಮಿ ಬಳಸಲಾಗಿದೆ ಎನ್ನುವ ಆರೋಪ ಇದೆ. ಅದರ ತನಿಖೆ ನಡೆಸಿ ಸಮಗ್ರ ವರದಿ ಸಲ್ಲಿಸುವಂತೆ ಸಿಬಿಐಗೆ ಕೋರ್ಟ್ ನಿರ್ದೇಶನ ನೀಡಿತ್ತು.