ಟೀಸರ್ ನಲ್ಲೆ  ಕುತೂಹಲ ಮೂಡಿಸಿದೆ 45

Ravi Talawar
ಟೀಸರ್ ನಲ್ಲೆ  ಕುತೂಹಲ ಮೂಡಿಸಿದೆ 45
WhatsApp Group Join Now
Telegram Group Join Now
      ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿರುವ ರಮೇಶ್ ರೆಡ್ಡಿ ನಿರ್ಮಾಣದ, ಅರ್ಜುನ್ ಜನ್ಯ ನಿರ್ದೇಶನದ ಹಾಗೂ ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ  ಅಭಿನಯದ ಬಹುನಿರೀಕ್ಷಿತ ’45’ ಚಿತ್ರದ ಟೀಸರ್ ಬಿಡುಗಡೆಯಾಗಿದೆ.
     ಯುಗಾದಿ ಹಬ್ಬದಂದು  ಶಿವರಾಜಕುಮಾರ್ ಟೀಸರ್ ಅನಾವರಣ ಮಾಡಿದರು. ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ ಈ ಟೀಸರ್ ಸಾಕಷ್ಟು ಕುತೂಹಲ ಮೂಡಿಸಿದೆ.
       ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಜ್ ಕುಮಾರ್ “ಡಿ.ಕೆ.ಡಿ ರಿಯಾಲಿಟಿ ಶೋ ಮಾಡುತ್ತಿದ್ದ ಸಮಯದಲ್ಲಿ ಅರ್ಜುನ್ ಜನ್ಯ 4 ರಿಂದ 5 ನಿಮಿಷದಲ್ಲಿ ಈ ಚಿತ್ರದ ಕಥೆ ಹೇಳಿದರು. ಕಥೆ ಕೇಳಿ ಥ್ರಿಲ್ ಆದೆ. ಕಥೆ ಕೊಟ್ಟು ಬಿಡುತ್ತೇನೆ ಯಾರಾದರೂ ನಿರ್ದೇಶನ ಮಾಡಲಿ ಎಂದು ಅರ್ಜುನ್ ಜನ್ಯ ಹೇಳಿದರು. ನೀವು ಕಥೆ ಚೆನ್ನಾಗಿ ಹೇಳಿದ್ದೀರ  ನೀವೇ ನಿರ್ದೇಶನ ಮಾಡಿ ಅಂದೆ. ನಂತರ ನಿರ್ಮಾಣಕ್ಕೆ ನಿರ್ಮಾಪಕ ರಮೇಶ್ ರೆಡ್ಡಿ ಮುಂದಾದರು. ಪ್ರೀತ್ಸೆ, ಲವ ಕುಶ ಚಿತ್ರಗಳಲ್ಲಿ ನಟ ಉಪೇಂದ್ರ ಜೊತೆ ನಟಿಸಿದ್ದೆ.  ಈಗ ಮತ್ತೆ ಅವರೊಂದಿಗೆ ಅಭಿನಯಿಸಿದ್ದೇನೆ. ರಾಜ್ ಬಿ ಶೆಟ್ಟಿ ಅವರ ಜೊತೆಗೆ ಇದು ಮೊದಲ ಚಿತ್ರ. ಎಲ್ಲಾ ಕಲಾವಿದ ಹಾಗೂ ತಂತ್ರಜ್ಞರ ಕಾರ್ಯವೈಖರಿ ತುಂಬಾ ಚೆನ್ನಾಗಿದೆ. ಟೀಸರ್ ನಲ್ಲೇ ಅರ್ಜುನ್ ಜನ್ಯ ಬಹಳ ಕುತೂಹಲ ಮೂಡಿಸಿದ್ದಾರೆ.  ಚಿತ್ರ ಕೂಡ ಬಹಳ ಚೆನ್ನಾಗಿರುತ್ತದೆ ಎಂಬ ಭರವಸೆ ಇದೆ. ’45’ ಚಿತ್ರ ಬರೀ ಕರ್ನಾಟಕದಲ್ಲಿ ಮಾತ್ರವಲ್ಲ. ಭಾರತದಾದ್ಯಂತ ಹೆಸರು ಮಾಡುವ ಚಿತ್ರವಾಗಲಿದೆ.  ಈ ಚಿತ್ರವನ್ನು ಬೇರೆಯವರು ನಿರ್ದೇಶನ ಮಾಡಿದ್ದರೆ ಕನ್ನಡಕ್ಕೆ ಸಿಗುತ್ತಿದ್ದ ಒಳ್ಳೆಯ ನಿರ್ದೇಶಕನನ್ನು ಕಳೆದುಕೊಳ್ಳುತ್ತಿದ್ದೆವು” ಎಂದರು.
     ನಟ ಉಪೇಂದ್ರ “ಒಳ್ಳೆಯ ಕಥೆ ನೀವೇ ಮಾಡಿ ಎಂದು ಅರ್ಜುನ್ ಜನ್ಯಗೆ ಶಿವಣ್ಣ ಅವರು ಹೇಳಿದ್ದರ ಫಲ ’45’ ಚಿತ್ರ. ನಮ್ಮಲ್ಲಿಯೂ ಉತ್ತಮ ನಿರ್ದೇಶಕರು ಇದ್ದಾರೆ ಎನ್ನುವುದನ್ನು ನಾನೂ ಏನೂ ಮಾಡದಿದ್ದಾಗ ಹೇಳಿದವರು ಶಿವಣ್ಣ. ಅವರಿಂದ ಎಷ್ಟು ಜನ ನಿರ್ದೇಶಕರು ಬಂದಿದ್ಧಾರೆ. ಕೆಲವರು ಸೂಪರ್ ಸ್ಟಾರ್ ಆಗಿದ್ದಾರೆ. ಶಿವಣ್ಣ ಅಪರಂಜಿ. ಅರ್ಜುನ್ ಜನ್ಯ ಸಂಗೀತದಲ್ಲಿ ಸಿನಿಮಾ ಸೂಪರ್ ಹಿಟ್ ಮಾಡ್ತಾರೆ. ಇನ್ನೂ ಸಿನಿಮಾ ನಿರ್ದೇಶನ ಹೇಗೆ ಮಾಡಿರಬೇಕು ಊಹಿಸಿ ನೋಡಿ. ಅರ್ಜುನ್ ಜನ್ಯ ಅವರು ಬರೀ ಸಂಗೀತ ನಿರ್ದೇಶಕ ಮತ್ತು ನಿರ್ದೇಶಕ ಮಾತ್ರ ಅಲ್ಲ. ಒಳ್ಳೆಯ ನಟ ಕೂಡ.‌ ಪ್ರತಿಯೊಬ್ಬ ಕಲಾವಿದರಿಗೂ ಹೇಗೆ ನಟಿಸಬೇಕೆಂದು ಅವರು ಹೇಳುತ್ತಿರಲಿಲ್ಲ. ನಟಿಸಿ ತೋರಿಸುತ್ತಿದ್ದರು. ಇನ್ನೂ ಚಿತ್ರರಂಗಕ್ಕೆ ರಮೇಶ್ ರೆಡ್ಡಿ ಅವರಂತಹ ನಿರ್ಮಾಪಕರು ಬೇಕಾಗಿದ್ದಾರೆ. ಈ ಸಿನಿಮಾ ಖಂಡಿತಾ ಯಶಸ್ವಿಯಾಗುತ್ತದೆ” ಎಂದರು.
     “ಈ ಚಿತ್ರದಲ್ಲಿ ಶಿವಣ್ಣ ಮತ್ತು ಉಪೇಂದ್ರ ಎನ್ನುವ ಇಬ್ಬರು ಸೂಪರ್ ಸ್ಟಾರ್ ಇದ್ದಾರೆ. ಚಿತ್ರದಲ್ಲಿ ನಾನೊಬ್ಬ ಕಲಾವಿದ ಅಷ್ಟೇ.  ಅವರು ತೆರೆಯ ಮೇಲೆ ಬರವಾಗ ಅವರ ಮದ್ಯೆ ಕುಳಿತು ವಿಷಲ್ ಹಾಕುವುದು ನನ್ನ ಭಾಗ್ಯ. ಅವರು ನನ್ನನ್ನು ಒಪ್ಪಿಕೊಂಡಿದ್ದು ಕೂಡ ನನ್ನ ಭಾಗ್ಯ. ಒಳ್ಳೆಯ ಕನ್ನಡ ಸಿನಿಮಾವನ್ನು ಕನ್ನಡದವರ ಜೊತೆಗೆ  ಹೊರಗಿನ ಮಂದಿಯೂ ನೋಡಬೇಕು ಎನ್ನುವ ಆಸೆ ನನ್ನದು. ಅರ್ಜುನ್ ಜನ್ಯ ಅವರು ಮುಂದಿನ ಸಿನಿಮಾ ಬೇರೆ ಭಾಷೆಯಲ್ಲಿ ನಿರ್ದೇಶನ ಮಾಡದೆ ಕನ್ನಡದಲ್ಲಿಯೇ ಮಾಡಬೇಕು. ಅರ್ಜುನ್ ಜನ್ಯ ಅವರ ನಿರ್ದೇಶನದ ವೈಖರಿ ನಿಜಕ್ಕೂ ಶ್ಲಾಘನೀಯ. ಚಿತ್ರದಲ್ಲಿರುವ ಪ್ರತಿ ಪಾತ್ರಕ್ಕೂ ಡಬ್ ಮಾಡಿ ಇದೇ ರೀತಿ ಬರಬೇಕು ಎಂದು ತೋರಿಸುತ್ತಿದ್ದರು‌. ನಿರ್ಮಾಪಕರು ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣ ಮಾಡಿದ್ದಾರೆ” ಎಂದು ನಟ ರಾಜ್ ಬಿ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.
     ನಿರ್ದೇಶಕ ಅರ್ಜುನ್ ಜನ್ಯ “ಈ ಚಿತ್ರ ಆಗಲು ಮುಖ್ಯ ಕಾರಣ ಶಿವಣ್ಣ. ಸಿನಿಮಾ ನಾವು ಅಂದು ಕೊಂಡ ಹಾಗೆ ಬರಲು ಕಾರಣ ನಿರ್ಮಾಪಕ ರಮೇಶ್ ರೆಡ್ಡಿ. ಅವರು ದುಡ್ಡಿನ ಮುಖ ನೋಡಿಲ್ಲ. ಚಿತ್ರ ಚೆನ್ನಾಗಿ ಮೂಡಿಬರಬೇಕೆಂಬ ಆಸೆ ಅಷ್ಟೇ ಅವರಿಗೆ.  ’45’ ಎನ್ನುವ ಶೀರ್ಷಿಕೆಯನ್ನು ಸುಮ್ಮನೆ ಇಟ್ಟಿಲ್ಲ. ಚಿತ್ರದ ಟೀಸರ್ ನಲ್ಲಿ ಕಥೆ ಹೇಳುವ ಪ್ರಯತ್ನ ಮಾಡಿದ್ದೇವೆ. ಅದು ಏನು ಎನ್ನುವುದನ್ನು ಪ್ರೇಕ್ಷಕರೇ ಗೆಸ್ ಮಾಡಲಿ. ಚಿತ್ರದಲ್ಲಿ ಗ್ರಾಫಿಕ್ ಕೆಲಸ ಹೆಚ್ಚಿಗೆ ಇದ್ದು ಕೆನಡಾದಲ್ಲಿ ಪರಿಣಿತ ತಂತ್ರಜ್ಞರ ತಂಡದಿಂದ ಸಿಜಿ ಕೆಲಸ ನಡೆಯುತ್ತಿದೆ. ಆಗಸ್ಟ್ 15 ಚಿತ್ರ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಮತ್ತೊಂದು ಟೀಸರ್, ಹಾಡುಗಳು ಹಾಗೂ ಟ್ರೇಲರ್ ಅನ್ನು ವಿಭಿನ್ನವಾಗಿ ಅನಾವರಣ ಮಾಡುವ ಯೋಚನೆ ಇದೆ” ಎಂದು ತಿಳಿಸಿದರು. ನಿರ್ಮಾಪಕ ರಮೇಶ್ ರೆಡ್ಡಿ “ನನಗೆ ತಿಳಿದ ಹಾಗೆ ಈ ರೀತಿಯ ಸಿನಿಮಾ ಭಾರತದಲ್ಲಿಯೇ ಈವರೆಗೂ ಬಂದಿಲ್ಲ.   ನಿಮ್ಮ  ಪ್ರೋತ್ಸಾಹವಿರಲಿ” ಎಂದು ಕೋರಿದರು.
     ಛಾಯಾಗ್ರಾಹಕ ಸತ್ಯ ಹೆಗಡೆ  “ಮ್ಯಾಜಿಕಲ್ ಕಂಪೋಸರ್ ಈಗ ಮ್ಯಾಜಿಕಲ್ ನಿರ್ದೇಶಕರಾಗಿದ್ದಾರೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ” ಎಂದರು.
ನಿರ್ಮಾಪಕ ಕೆ.ಮಂಜು, ಸಂಜಯ್ ಗೌಡ, ಇಂದ್ರಜಿತ್ ಲಂಕೇಶ್, ಕೆ.ವಿ.ಎನ್ ಸುಪ್ರೀತ್, ಆನಂದ್ ಆಡಿಯೋ ಶ್ಯಾಮ್ , ಶ್ರೇಯಸ್ ಮಂಜು ಮುಂತಾದವರು  ಸಮಾರಂಭದಲ್ಲಿ ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article