ಉತ್ತರ ಕರ್ನಾಟಕ ಸೊಗಡಿನ ಸೂರ್ಯ 

Hasiru Kranti
ಉತ್ತರ ಕರ್ನಾಟಕ ಸೊಗಡಿನ ಸೂರ್ಯ 
WhatsApp Group Join Now
Telegram Group Join Now
ಉತ್ತರ ಕರ್ನಾಟಕ ಭಾಗದ ಸಾಕಷ್ಟು ನಿರ್ಮಾಪಕ, ನಿರ್ದೇಶಕರು ಕನ್ನಡ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಅದೇರೀತಿ ಇದೀಗ ಬೆಳಗಾವಿ ಮೂಲದ ಬಸವರಾಜ ಬೆಣ್ಣೆ ಹಾಗೂ ರವಿ ಬೆಣ್ಣೆ ಸಹೋದರರೂ ತಮ್ಮ ಕೊಡುಗೆ ನೀಡಲು ಅಣಿಯಾಗಿದ್ದಾರೆ.‌ ನಂದಿ ಸಿನಿಮಾಸ್ ಅಡಿಯಲ್ಲಿ ಅವರು ‘ಸೂರ್ಯ’ ಎಂಬ ಮಾಸ್ ಲವ್ ಸ್ಟೋರಿ ಒಳಗೊಂಡ ಚಿತ್ರವನ್ನು ನಿರ್ಮಿಸಿದ್ದು, ಸಂಕ್ರಾಂತಿ ಹಬ್ಬದ ಕೊಡುಗೆಯಾಗಿ ಜನವರಿ 15 ರಂದು ತೆರೆಗೆ ತರಲಿದ್ದಾರೆ.
ಸ್ಲಂನಲ್ಲಿ ಬೆಳೆದ ಯುವಕನೊಬ್ಬ ತನ್ನ  ಪ್ರೀತಿಯನ್ನು ಪಡೆದುಕೊಳ್ಳಲು ಏನೆಲ್ಲ ಹೋರಾಟ, ಸಾಹಸ ಮಾಡುತ್ತಾನೆ, ಆತನಿಗೆ ಯಾರೆಲ್ಲ ಸಹಾಯ ಮಾಡುತ್ತಾರೆ ಎಂಬುದನ್ನು ಈ ಚಿತ್ರದ ಮೂಲಕ ನಿರ್ದೇಶಕ ಸಾಗರ್ ದಾಸ್ ಅವರು ಹೇಳಹೊರಟಿದ್ದಾರೆ. ಯುವನಟ ಪ್ರಶಾಂತ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ಹರ್ಷಿತಾ ನಾಯಕಿ ಪಾತ್ರ ನಿರ್ವಹಿಸಿದ್ದಾರೆ.
ವೇದಿಕೆಯಲ್ಲಿ ನಿರ್ಮಾಪಕ ಬಸವರಾಜ ಬೆಣ್ಣಿ ಮಾತನಾಡುತ್ತಾ “ಟ್ರೇಲರ್ ಚೆನ್ನಾಗಿ ಮೂಡಿಬಂದಿದೆ. ಪೂನಾದಲ್ಲಿ ಉದ್ಯಮ ನಡೆಸುತ್ತಿರುವ ನಾವು, ಹುಟ್ಟಿಬೆಳೆದ ಕನ್ನಡ ನಾಡಿಗೆ ಏನಾದರೂ ಕೊಡುಗೆ ನೀಡಬೇಕೆಂದು ಈ ಚಿತ್ರ ಮಾಡಿದ್ದೇವೆ” ಎಂದರೆ, ಅವರ ಸಹೋದರ ರವಿ ಬೆಣ್ಣಿ  “ಜನವರಿ 15 ಕ್ಕೆ ನಮ್ಮ ಚಿತ್ರ ಬಿಡುಗಡೆಯಾಗಲಿದೆ. ಸಾಗರ್ ಕಥೆ ಹೇಳಿದಾಗ ಬಜೆಟ್ ಜಾಸ್ತಿ ಅನಿಸಿತ್ತು. ಸಿನಿಮಾ ನೋಡಿದಾಗ ನಮ್ಮ ಹಣ ಎಲ್ಲೂ ಹೋಗಿಲ್ಲ ಅನ್ನಿಸಿತು” ಎಂದರು.
ನಾಯಕ ಪ್ರಶಾಂತ್ “ಸ್ಲಂನಲ್ಲಿ ಬೆಳೆದ ಹುಡುಗನಾಗಿ ನಾನೀ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಆತನಿಗೆ ಹುಡುಗಿಯ ಜತೆ ಪ್ರೀತಿ ಆದ ನಂತರ ಅದನ್ನು ಆತ ಹೇಗೆ ಉಳಿಸಿಕೊಳ್ಳುತ್ತಾನೆ ಎನ್ನುವುದೇ ಚಿತ್ರದ ಎಳೆ. ಸಿನಿಮಾ ತುಂಬಾ  ಚೆನ್ನಾಗಿ ಮೂಡಿಬಂದಿದೆ” ಎಂದರು.
ನಾಯಕಿ ಹರ್ಷಿತಾ “ನಮ್ಮ ಚಿತ್ರ ಬಿಡುಗಡೆಯಾಗುತ್ತಿರುವುದು ಖುಷಿಯಾಗಿದೆ‌. ಹಿರಿಯ ಕಲಾವಿದರ ಜೊತೆ ಕೆಲಸ ಮಾಡಿದ್ದು ಒಂದೊಳ್ಳೆ ಅನುಭವ ನೀಡಿದೆ.  ಕಾಲೇಜ್ ಹೋಗೋ ಹುಡುಗಿ ತನ್ನ ಪ್ರೀತಿಯ ವಿಷಯದಲ್ಲಿ ಯಾವ ನಿರ್ಧಾರ ತಗೋತಾಳೆ ಅನ್ನುವುದೇ ಈ ಚಿತ್ರದ ಕಥೆ. ಡಬ್ಬಿಂಗ್ ಮಾಡುವಾಗ ನನ್ನ ಪಾತ್ರ ನೋಡಿ ಖುಷಿಯಾಯ್ತ” ಎಂದು ಹೇಳಿದರು.
ನಿರ್ದೇಶಕ ಸಾಗರ್  “ಸೂರ್ಯ  ನಾಯಕನ ಹೆಸರು. ಚಿತ್ರದ ಬಜೆಟ್ ಮೂರು, ನಾಲ್ಕು ಪಟ್ಟು ಹೆಚ್ಚಾಗಿದೆ. ಚಿತ್ರದ ಹಾಡಲ್ಲಿ ಕಲಾಂ, ಅಂಬೇಡ್ಕರ್, ಮೋದಿ ಅವರನ್ನು ಬಳಸಿಕೊಂಡಿದ್ದೇವೆ. ಏಕೆಂದರೆ ನಾಯಕನೂ ಅವರಂತೆಯೇ ಮಿಡಲ್ ಕ್ಲಾಸ್ ನಿಂದ ಬಂದು ಸಾಧನೆ ಮಾಡುತ್ತಾನೆ. ಉತ್ತರ ಕರ್ನಾಟಕ, ಬೆಂಗಳೂರು ಸುತ್ತಮುತ್ತ ಹಾಗೂ ಪೂನಾದಲ್ಲಿ ಚಿತ್ರದ ಚಿತ್ರೀಕರಣ ನಡೆಸಿದ್ದೇವೆ, ಪ್ರಮೋದ್ ಶೆಟ್ಟಿ, ಶೃತಿ ಅವರನ್ನು ಬೇರೆಯದೇ ಪಾತ್ರದಲ್ಲಿ ನೋಡಬಹುದು. ಆರ್ಮುಗಂ ರವಿಶಂಕರ್ ಅವರದು ಈವರೆಗೆ ಮಾಡಿರದಂಥ ಪಾತ್ರ.
‘ಸೂರ್ಯ’ ಚಿತ್ರವನ್ನು ಕನ್ನಡ ವರ್ಷನ್ ಮಾತ್ರ ಮಾಡಿದ್ದೇವೆ. ಬೇರೆ ರಾಜ್ಯಗಳಲ್ಲಿ ಕನ್ನಡದಲ್ಲೇ ರಿಲೀಸ್ ಮಾಡುತ್ತೇವೆ. ಸಂಕ್ರಾಂತಿ ಹಬ್ಬಕ್ಕೆ ಸಮ್ ಕಾಂತ್ರಿ ಮಾಡಲು ನಮ್ಮ ಚಿತ್ರ ರೆಡಿಯಾಗಿದೆ” ಎಂದರು.
ನಟಿ ಶೃತಿ “ಚಿತ್ರದಲ್ಲಿ ಡಾಕ್ಟರ್ ಮಮತ ಎಂಬ ಪಾತ್ರ ಮಾಡಿದ್ದೇನೆ.  ಒಂದು ವಿಚಾರಕ್ಕೆ ಆಕೆಗೆ ತುಡಿತವಿರುತ್ತೆ. ಆಕೆ ಸಾಫ್ಟ್ ಆದರೂ, ಕಷ್ಟ ಬಂದಾಗ ರೆಬೆಲ್ ಆಗ್ತಾಳೆ. ಸಾಗರರ ಆತ್ಮವಿಶ್ವಾಸ ನೋಡಿ ಈ ಸಿನಿಮಾ ಮಾಡಿದೆ. ಒಳ್ಳೆಯ ಟೀಮ್ ಗೆ   ಬೆಂಬಲ‌ ನೀಡಿ” ಎಂದರು.
ಪ್ರಮೋದ್ ಶೆಟ್ಟಿ “ಮೊದಲಬಾರಿಗೆ ಉತ್ತರ ಕರ್ನಾಟಕ ಶೈಲಿಯ ಪಾತ್ರ ಮಾಡಿದ್ದೇನೆ. ಸ್ಲಂನಲ್ಲಿ ಬೆಳೆದ ಹುಡುಗನಿಗೆ ಬೆನ್ನೆಲುಬಾಗಿ ನಿಲ್ಲುವ ಬಾಂಡ್ ಬಸು ಪಾತ್ರ ನನ್ನದು” ಎಂದರು. ಟಿ.ಎಸ್. ನಾಗಾಭರಣ, ಬಲ ರಾಜವಾಡಿ, ಭಜರಂಗಿ‌ ಪ್ರಸನ್ನ, ಪ್ರಮೋದ್ ಶೆಟ್ಟಿ, ಕುಂಕುಮ್ ಹರಿಹರ, ದೀಪಿಕಾ, ಕಡ್ಡಿಪುಡಿ ಚಂದ್ರು ಚಿತ್ರದ ಉಳಿದ ಪಾತ್ರ ವರ್ಗದಲ್ಲಿದ್ದಾರೆ.
ಬಿ.ಸುರೇಶ್ ಜೊತೆ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದ ಸಾಗರ್ ದಾಸ್ ಸೂರ್ಯ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ೫ ಹಾಡುಗಳಿಗೆ
ಶ್ರೀಶಾಸ್ತ ಅವರು ಸಂಗೀತ ಸಂಯೋಜನೆ ಮಾಡಿದ್ದು, ಬಹದ್ದೂರ್ ಚೇತನ್, ಯೋಗರಾಜ ಭಟ್ ಹಾಗೂ ನಿರ್ದೇಶಕರೂ ಸಾಹಿತ್ಯ ರಚಿಸಿದ್ದಾರೆ. ಉತ್ತರ ಕರ್ನಾಟಕ ಶೈಲಿಯ  ‘ಕೆಳಪಾನ ಗಲ್ಲದ ಹುಡುಗಿ’ ಎಂಬ ಹಾಡು ಎಲ್ಲಾ ಕಡೆ ವೈರಲ್ ಆಗಿದೆ. ಮನುರಾಜ್  ಛಾಯಾಗ್ರಹಣ, ಮಣಿಕಂಠ ಕೆ.ವಿ.  ಸಂಭಾಷಣೆ, ನರಸಿಂಹ  ಸಾಹಸ ಸಂಯೋಜನೆ ಇದೆ.
WhatsApp Group Join Now
Telegram Group Join Now
Share This Article