ಬೆಂಗಳೂರು, ಮೇ 20: ರಾಜ್ಯದಲ್ಲಿರುವುದು ರೈತ ವಿರೋಧಿ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸರ್ಕಾರ ಅನ್ಯಾಯ ಮಾಡಿದೆ. ಅಭಿವೃದ್ಧಿಗೆ ಮೀಸಲಿಟ್ಟ ಹಣ ಬೇರೆ ಕಡೆ ವರ್ಗಾವಣೆಯಾಗಿದೆ. ಯೋಜನೆಗಳಿಗೆ ಜಾರಿಯಾದ ಕೇಂದ್ರದ ಹಣವನ್ನು ತಡೆ ಹಿಡಿದಿದ್ದಾರೆ. ಎಸ್ಡಿಆರ್ಎಫ್ ಹಣ ಎಲ್ಲಿ ಖರ್ಚು ಮಾಡಿದ್ದಾರೆ ಗೊತ್ತಿಲ್ಲ. ಈ ಎಲ್ಲದಕ್ಕೂ ಸರ್ಕಾರ ಉತ್ತರ ಕೊಡಬೇಕು. ಇವರು ಸಾಲ ಮಾಡಿದ್ದಾರೆ ಹೊರತು, ಸಾಧನೆ ಏನೂ ಮಾಡಿಲ್ಲ. ಸರ್ಕಾರದ ಸಂಪೂರ್ಣ ಸಾಧನೆ ಶೂನ್ಯವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಾಗ್ದಾಳಿ ಮಾಡಿದರು.
ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಆರ್ ಅಶೋಕ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸರ್ಕಾರ ಏನು ಸಾಧನೆ ಮಾಡಿದೆ ಅಂತ ಜನ ಪ್ರಶ್ನೆ ಮಾಡುತ್ತಿದ್ದಾರೆ. ಅಸಾಧ್ಯವಾಗಿರುವುದನ್ನ ಸಾಧ್ಯವಾಗಿಸಿದ್ದೇವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ರಾಜ್ಯ ಸರ್ಕಾರ ವೈಫಲ್ಯ ತೆರೆದಿಟುತ್ತಿದ್ದೇವೆ, ವಿರೋಧ ಪಕ್ಷವಾಗಿ ನಮ್ಮ ಜವಾಬ್ದಾರಿ ನಿರ್ವಹಿಸುತ್ತಿದ್ದೇವೆ ಎಂದು ಬಿವೈ ವಿಜಯೇಂದ್ರ ಹೇಳಿದರು.
ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಜೊತೆ ಸಂಘರ್ಷದ ಹಾದಿ ತುಳಿದಿದೆ. ಸಿಎಂ, ಡಿಸಿಎಂ ಮತ್ತು ಸಚಿವರು ಕೇಂದ್ರ ಸರ್ಕಾರಕ್ಕೆ ಬೊಟ್ಟು ಮಾಡುತ್ತಿದ್ದಾರೆ. ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ದೊಡ್ಡ ನಿರೀಕ್ಷೆ ಹುಟ್ಟು ಹಾಕಿದ್ದ ನಾಯಕರು ಈಗ ಏನು ಮಾಡುತ್ತಿದ್ದಾರೆ. ಯಾವುದೇ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ಕೊಟ್ಟಿಲ್ಲ. ಬರದ ವಿಚಾರದಲ್ಲಿ ಸರಕಾರದ ನಡುವಳಿಕೆ ಸರಿ ಇಲ್ಲ. ಜವಾಬ್ದಾರಿಯುತ ಸರ್ಕಾರ ಇದೆ ಅಂತ ಅನ್ನಿಸುತ್ತಿಲ್ಲ ಎಂದು ಬಿವೈ ವಿಜಯೇಂದ್ರ ಮಾತನಾಡಿದರು.
ಆದರೆ ಸರ್ಕಾರವನ್ನೇ ನೇಣಿಗೆ ಹಾಕಬೇಕು ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆಕ್ರೋಶ ಹೊರಹಾಕಿದರು. ಅಂಜಲಿ ಕೊಲೆ ಹಿಂದೆ ಪೊಲೀಸರ ಲೋಪವೂ ಇದೆ ಅಂತ ಗೃಹ ಸಚಿವರು ಹೇಳಿದ್ದಾರೆ. ಪೊಲೀಸರ ಲೋಪ ಇದೆ ಅಂತ ನೀವೇ ಒಪ್ಪಿಕೊಂಡ ಮೇಲೆ ಸರ್ಕಾರ ನಡೆಸಲು ನಿಮಗೆ ಏನು ಯೋಗ್ಯತೆ ಇದೆ?ಗೃಹ ಸಚಿವರೇ ತಮ್ಮ ವೈಫಲ್ಯ ಒಪ್ಪಿಕೊಂಡಿದ್ದಾರೆ. ಕೊಲೆಗಡುಕರಿಗೆ ನಮ್ಮ ರಾಜ್ಯ ಸ್ವರ್ಗವಾಗುತ್ತಿದೆ. ಹಿಂದುಗಳ ಮಾರಣ ಹೋಮವಾಗುತ್ತಿದೆ. ಠಾಣೆಯಲ್ಲೇ ಪೊಲೀಸರ ಮೇಲೆ ಹಲ್ಲೆ ಮಾಡುತ್ತಾರೆ. ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿಸಿದ್ದು ಸರ್ಕಾರದ ಸಾಧನೆ. ಹನುಮಾನ ಚಾಲಿಸಾ ಹೇಳಿದರೆ ಹಲ್ಲೆ ಮಾಡುತ್ತಾರೆ. ಲವ್ ಜಿಹಾದ್ ಪ್ರಕರಣ ಹೆಚ್ಚಾಗಿದೆ ಹಲ್ಲೆ ಮಾಡುವುದು ಕೂಡ ಫ್ರೀ ಭಾಗ್ಯನಾ? ಎಂದು ಪ್ರಶ್ನಿಸಿದರು.
ಆಂಬುಲೆನ್ಸ್ ನೌಕಕರರಿಗೆ, ಸರ್ಕಾರ ಬಸ್ ಚಾಲಕರಿಗೆ ವೇತನ ನೀಡುತ್ತಿಲ್ಲ. ಬಿಬಿಎಂಪಿ ಗುತ್ತಿಗೆದಾರರ ಬಾಕಿ ಬಿಲ್ ನೀಡಿಲ್ಲ. ಸರ್ಕಾರದ ಹಣಕಾಸು ಸ್ಥಿತಿ ವೆಂಟಿಲೇಟರ್ನಲ್ಲಿದೆ. ಒಂದು ಲಕ್ಷ ಕೋಟಿ ಸಾಲ ದಾಟಿ ಹೋಗಿದೆ. ಎರಡು ಕೋಟಿ ಸಾಲ ಮಾಡುವಂತಹ ಸ್ಥಿತಿ ಬಂದಿದೆ. ಲೂಟಿ ಸರ್ಕಾರ ಜನರಿಗೆ ಶಿಕ್ಷೆ ಕೊಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬ್ರ್ಯಾಂಡ್ ಬೆಂಗಳೂರು ಬ್ಯಾಡ್ ಬೆಂಗಳೂರು ಆಯ್ತು. ಸುರಂಗ ಟನಲ್ ಏನಾಯ್ತು? ದೆಹಲಿಗೆ ಟನಲ್ ಮಾಡಿದ್ದೀರಾ? ಎಲ್ಲಿ ಹೋಯ್ತು ನಿಮ್ಮ ಟನಲ್? ಫುಟ್ ಪಾತ್ ಕ್ಲಿಯರ್ ಅಂದವರು ಏನು ಮಾಡಿದ್ರು?ಸುಲಿಗೆ ಗ್ಯಾರಂಟಿ, ಹೆಣ್ಣುಮಕ್ಕಳಿಗಿಲ್ಲ ಬದುಕುವ ಗ್ಯಾರಂಟಿ. ಬದುಕುವ ಗ್ಯಾರಂಟಿ ಇಲ್ಲದ ಸರ್ಕಾರ. ಈ ಸರ್ಕಾರವನ್ನ ರಾಜ್ಯಪಾಲರು ಕೂಡಲೇ ವಜಾ ಮಾಡಬೇಕು. ಅಭಿವೃದ್ಧಿ ಶೂನ್ಯ ಸರ್ಕಾರ, ಕೊಲೆಗಡುಕರ ಸರ್ಕಾರ. ಖಜಾನೆ ಲೂಟಿ ಮಾಡಿ, ಕೊಲೆಗಳ ಸಾಧನೆ, ಬೋಗಸ್ ಸರ್ಕಾರ. ಖಜಾನೆ ಭಾಗ್ಯ ಕೊಟ್ಟಿದ್ದರೆ ಒಳ್ಳೆಯದಾಗುತ್ತಿತ್ತು. ಸ್ವತಃ ರಾಜೀನಾಮೆ ಕೊಟ್ಟು ಹೋಗಬೇಕು ಎಂದು ಗರಂ ಆದರು.