ಆಪರೇಷನ್ ಸಿಂಧೂರ: ಪಹಲ್ಗಾಮ್ ಉಗ್ರ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಇಂದು ಮುಂಜಾನೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಮತ್ತು ರಾಜೌರಿ ಜಿಲ್ಲೆಗಳ ಸಮೀಪದ ನಿಯಂತ್ರಣ ರೇಖೆಯ (ಎಲ್‌ಒಸಿ) ಬಳಿ ಸ್ಫೋಟಗಳ ಶಬ್ದ ಕೇಳಿಬಂದಿದೆ.
ಇನ್ನೊಂದೆಡೆ, ಜಮ್ಮು, ಪಠಾಣ್‌ಕೋಟ್ ಮತ್ತು ಉಧಮ್‌ಪುರ ಸೇರಿದಂತೆ ಉತ್ತರ ಮತ್ತು ಪಶ್ಚಿಮ ಭಾರತದ ಭಾರತೀಯ ಸೇನಾ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ನಡೆಸಿದ ದೊಡ್ಡ ಪ್ರಮಾಣದ ಡ್ರೋನ್ ಮತ್ತು ಕ್ಷಿಪಣಿ ದಾಳಿಯನ್ನು ಭಾರತೀಯ ಸಶಸ್ತ್ರ ಪಡೆಗಳು ಯಶಸ್ವಿಯಾಗಿ ವಿಫಲಗೊಳಿಸಿವೆ.
ರಾಜಸ್ಥಾನದ ಬಿಕಾನೇರ್ ಮತ್ತು ಪಂಜಾಬ್‌ನ ಜಲಂಧರ್‌ನಲ್ಲಿ ಸಂಪೂರ್ಣ ಬ್ಲ್ಯಾಕೌಟ್ ಜಾರಿಗೊಳಿಸಲಾಗಿದೆ. ಕಿಶ್ತ್ವಾರ್, ಅಖ್ನೂರ್, ಸಾಂಬಾ, ಜಮ್ಮು ಮತ್ತು ಅಮೃತಸರ, ಜಲಂಧರ್‌ನಲ್ಲಿಯೂ ಕಳೆದ ರಾತ್ರಿ ಬ್ಲ್ಯಾಕೌಟ್ ಮಾಡಲಾಗಿತ್ತು. ಪಾಕಿಸ್ತಾನ ಗುರುವಾರ ಜಮ್ಮುವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಈ ದಾಳಿಯನ್ನು ಭಾರತೀಯ ವಾಯು ರಕ್ಷಣಾ ಪಡೆ ಪ್ರಬಲವಾಗಿ ಹಿಮ್ಮೆಟ್ಟಿಸುತ್ತಿದೆ.
ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ (ಪಿಒಜೆಕೆ) ನಲ್ಲಿರುವ ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಭಾರತ ಧ್ವಂಸಗೊಳಿಸಿದೆ.