ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವ ಹೂತಿದ್ದಾಗಿ ತಪ್ಪೊಪ್ಪಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ (ಎಸ್‌ಐಟಿ) ತನಿಖೆಯನ್ನು ತೀವ್ರಗೊಳಿಸಿದ್ದು, ಮೃತದೇಹಗಳ ಅವಶೇಷ ಪತ್ತೆಗಾಗಿ ನಡೆಯುತ್ತಿರುವ ಶೋಧ ಕಾರ್ಯಾಚರಣೆ ಮಂಗಳವಾರ 7ನೇ ದಿನಕ್ಕೆ ಕಾಲಿಟ್ಟಿದೆ.
ನೇತ್ರಾವತಿ ಸ್ನಾನಘಟ್ಟದ ಬಳಿಯ ಕಾಡಿನಲ್ಲಿ ಸಾಕ್ಷಿ ದೂರುದಾರ ಈ ಹಿಂದೆ ಗುರುತಿಸಿದ್ದ 11ನೇ ಸ್ಥಳದಲ್ಲಿ ಎಸ್ಐಟಿ ಶೋಧ ಕಾರ್ಯ ಆರಂಭಿಸಿದೆ. ಸೋಮವಾರದ ಕಾರ್ಯಾಚರಣೆಯ ವೇಳೆ ದೂರುದಾರನು ಈ ಹಿಂದೆ ತೋರಿಸಿದ್ದ 11ನೇ ಜಾಗಕ್ಕಿಂತ ಮುಂದಕ್ಕೆ ಕಾಡಿನೊಳಗೆ ಎಸ್ಐಟಿ ಅಧಿಕಾರಿಗಳನ್ನು ಕರೆದೊಯ್ದಿದ್ದು, ಅಲ್ಲಿ ನೆಲದ ಮೇಲೆಯೇ ಅಸ್ಥಿಪಂಜರದ ಅವಶೇಷಗಳು ಸಿಕ್ಕಿವೆ ಎಂದು ತಿಳಿದುಬಂದಿದೆ.
ಈ ಅಸ್ಥಿಪಂಜರಗಳನ್ನು ತಜ್ಞರ ತಂಡ ವೈಜ್ಞಾನಿಕವಾಗಿ ಸಂಗ್ರಹ ಮಾಡಿದ್ದು, ಅದನ್ನು ಮಣಿಪಾಲದ ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ವಿಧಿವಿಜ್ಞಾನ ವಿಶ್ಲೇಷಣೆಗಾಗಿ ಕಳುಹಿಸಲಾಗಿದೆ.