ನವದೆಹಲಿ,09: ವಿಶ್ವದೆಲ್ಲೆಡೆಗೆ ತಮ್ಮ ಕೋವಿಡ್ 19 ಲಸಿಕೆಗಳನ್ನು ಹಿಂಪಡೆಯುವುದಾಗಿ ಆಸ್ಟ್ರಾಜೆನೆಕಾ ಔಷಧ ತಯಾರಿಕೆ ಸಂಸ್ಥೆ ಘೋಷಿಸಿದೆ. ಇದರ ಬೆನ್ನಲ್ಲೇ ಈ ಸಂಸ್ಥೆಯ ಕೋವಿಡ್ ಲಸಿಕೆ ಪೂರೈಸಿದ ಭಾರತದ ಪುಣೆ ಮೂಲದ ಭಾರತೀಯ ಸೆರಂ ಸಂಸ್ಥೆ (ಎಸ್ಐಐ) ಪ್ರತಿಕ್ರಿಯಿಸಿದ್ದು, 2021ರ ಡಿಸೆಂಬರ್ನಿಂದಲೇ ನಾವು ಹೆಚ್ಚುವರಿ ಕೋವಿಶೀಲ್ಡ್ ಲಸಿಕೆ ಉತ್ಪಾದನೆ ಮತ್ತು ಪೂರೈಕೆಯನ್ನು ನಿಲ್ಲಿಸಿದ್ದೆವು ಎಂದು ಹೇಳಿದೆ.
ಆಸ್ಟ್ರಾಜೆನೆಕಾದ ಎಜೆಡ್ 1222 ಲಸಿಕೆಯನ್ನು ಸೇರಂ ಸಂಸ್ಥೆ ‘ಕೋವಿಶೀಲ್ಡ್’ ಹೆಸರಿನಲ್ಲಿ ಉತ್ಪಾದಿಸಿ ಪೂರೈಸಿತ್ತು. ಭಾರತ ಸೇರಿದಂತೆ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಿಗೂ ಈ ಲಸಿಕೆಯನ್ನು ಪೂರೈಕೆ ಮಾಡಲಾಗಿದೆ. ಯುರೋಪ್ನಲ್ಲಿ ವ್ಯಾಕ್ಸ್ಜೆವ್ರಿಯಾ ಹೆಸರಿನಿಂದ ವಿತರಿಸಲಾಗಿತ್ತು.
ಕೋವಿಡ್ ಹೊಸ ರೂಪಾಂತರ ತಳಿ ಬಂದಾಗ ಈ ಲಸಿಕೆಗೆ ಈ ಹಿಂದೆ ಇದ್ದ ಬೇಡಿಕೆ ಗಮನಾರ್ಹವಾಗಿ ಕುಸಿದಿತ್ತು. ಇದರಿಂದಾಗಿ ಡಿಸೆಂಬರ್ 2021ರಿಂದಲೇ ಹೆಚ್ಚುವರಿ ಕೋವಿಶೀಲ್ಡ್ ಲಸಿಕೆ ಉತ್ಪಾದನೆ ಮತ್ತು ಪೂರೈಕೆಯನ್ನು ನಿಲ್ಲಿಸಿದ್ದೆವು ಎಂದು ಸೆರಂ ವಕ್ತಾರರು ತಿಳಿಸಿದ್ದಾರೆ.
ಸದ್ಯದ ಬೆಳವಣಿಗೆಗಳ ಕುರಿತು ನಮಗೆ ಸಂಪೂರ್ಣ ಮಾಹಿತಿ ಇದೆ. ಈ ಸಮಯದಲ್ಲಿ ಪಾರದರ್ಶಕತೆ ಮತ್ತು ಸುರಕ್ಷತೆಗೆ ನಮ್ಮ ಬದ್ಧತೆಯನ್ನು ಒತ್ತಿಹೇಳುವುದು ಬಹಳ ಮುಖ್ಯ. ಇದರೊಂದಿಗೆ 2021ರ ಪ್ಯಾಕೇಜಿಂಗ್ನಲ್ಲಿಯೇ ನಾವು ಟಿಟಿಎಸ್ ಸೇರಿದಂತೆ ಇತರೆ ಅಪರೂಪದ ಅಡ್ಡ ಪರಿಣಾಮಗಳ ಕುರಿತು ತಿಳಿಸಿದ್ದೇವೆ ಎಂದು ಸಂಸ್ಥೆ ಪ್ರಕಟಿಸಿದೆ.
ಇದೇ ವೇಳೆ ಸಂಸ್ಥೆ, ಸಾಂಕ್ರಾಮಿಕತೆಯ ವೇಳೆ ಔಷಧ ತಯಾರಕ ಘಟಕಗಳು ಎದುರಿಸಿದ ಸವಾಲಿನ ಕುರಿತು ಒತ್ತಿ ಹೇಳಿದೆ. ಸಾಂಕ್ರಾಮಿಕ ರೋಗದ ವಿರುದ್ಧದ ಒಗ್ಗಟ್ಟಿನ ಹೋರಾಟದಲ್ಲಿ ಜಾಗತಿಕ ಪ್ರತಿಕ್ರಿಯೆಯನ್ನು ಸುಲಭಗೊಳಿಸುವಲ್ಲಿ ಸರ್ಕಾರಗಳ ಸಹಯೋಗದ ಪ್ರಯತ್ನಗಳು ಸಾಗಿದವು. ಬಿಕ್ಕಟ್ಟಿನ ಕಾಲದಲ್ಲಿ ಜನರನ್ನು ಸೋಂಕಿನಿಂದ ರಕ್ಷಿಸಲು ಲಸಿಕೆ ಪೂರೈಸಲಾಗಿದ್ದು, ಕೋವಿಶೀಲ್ಡ್ ಲಸಿಕೆಯನ್ನು ಅತಿ ಹೆಚ್ಚು ಜನರಿಗೆ ನೀಡಲಾಗಿದೆ. ಇನ್ನು ಅಪರೂಪದ ಅಡ್ಡ ಪರಿಣಾಮಗಳ ಹೊರತಾಗಿ ಆಸ್ಟ್ರಜೆನೆಕಾದ ವ್ಯಾಕ್ಸ್ಜೆವ್ರಿಯಾ ಮತ್ತು ಕೋವಿಶೀಲ್ಡ್ ಎಂಬ ಎರಡು ಲಸಿಕೆಗಳು ಜಗತ್ತಿನೆಲ್ಲೆಡೆ ಲಕ್ಷಾಂತರ ಜನರ ಪ್ರಾಣ ಉಳಿಸಲು ಸಹಾಯ ಮಾಡಿವೆ ಎಂದು ತಿಳಿಸಿದೆ.