ಸಮಸ್ಯೆಯೇ ಸಂಶೋಧನೆಯ ಬೀಜ: ಡಾ. ಎಸ್.ಎಂ. ಶಶಿಧರ

Ravi Talawar
ಸಮಸ್ಯೆಯೇ ಸಂಶೋಧನೆಯ ಬೀಜ: ಡಾ. ಎಸ್.ಎಂ. ಶಶಿಧರ
WhatsApp Group Join Now
Telegram Group Join Now
ಆರ್.ವೈ.ಎಂ.ಇ.ಸಿ.ಯಲ್ಲಿ ಮೂರು ದಿನಗಳ ಸಂಶೋಧನಾ ವಿಧಾನಗಳ ಕಾರ್ಯಾಗಾರಕ್ಕೆ ಚಾಲನೆ
ಬಳ್ಳಾರಿ, ಮೇ 24: “ಸಮಸ್ಯೆಯೇ ಸಂಶೋಧನೆಯ ಬೀಜವಾಗಿದೆ. ಪ್ರತಿಯೊಂದು ಸಮಸ್ಯೆಯೂ ಹೊಸ ಆವಿಷ್ಕಾರಕ್ಕೆ ದಾರಿಯಾಗಬಲ್ಲದು,” ಎಂದು ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ (ಇಂಡಿಯಾ), ಮುನಿರಾಬಾದ್ ಕೇಂದ್ರದ ಅಧ್ಯಕ್ಷ ಡಾ. ಎಸ್.ಎಂ. ಶಶಿಧರ ಅಭಿಪ್ರಾಯಪಟ್ಟರು.
ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜು (ಆರ್.ವೈ.ಎಂ.ಇ.ಸಿ.)ನ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗ ಮತ್ತು ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ (ಇಂಡಿಯಾ), ಮುನಿರಾಬಾದ್ ಕೇಂದ್ರದ ಸಹಯೋಗದೊಂದಿಗೆ ಆಯೋಜಿಸಿದ ಮೂರು ದಿನಗಳ ಸಂಶೋಧನಾ ವಿಧಾನಗಳ ಕಾರ್ಯಾಗಾರದ ಉದ್ಘಾಟನೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
“ಪರಿಸರ ಮಾಲಿನ್ಯದಂತಹ ಸಮಸ್ಯೆಗಳು ಎಲೆಕ್ಟ್ರಿಕ್ ವಾಹನಗಳ ಸಂಶೋಧನೆಗೆ ದಾರಿಯಾದವು. ಅಂಗವಿಕಲರಿಗೆ ನಡೆದಾಡುವ ಕಷ್ಟವನ್ನು ಪರಿಹರಿಸಲು ವೀಲ್‌ಚೇರ್ ಸಂಶೋಧನೆಯಾಯಿತು. ಪ್ರತಿಯೊಂದು ಆವಿಷ್ಕಾರವೂ ಸಮಸ್ಯೆಯಿಂದ ಹುಟ್ಟುತ್ತದೆ. ಸಂಶೋಧನೆ ಎಂದರೆ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರ ಕಂಡುಹಿಡಿಯುವ ಕಲೆಯಾಗಿದೆ. ಸಂಶೋಧನಾ ಮನೋಭಾವವಿಲ್ಲದ ಇಂಜಿನಿಯರ್ ಎಂಜಿನ್ ಇಲ್ಲದ ವಾಹನದಂತೆ,” ಎಂದು ಡಾ. ಎಸ್.ಎಂ. ಶಶಿಧರ ಅಭಿಪ್ರಾಯಪಟ್ಟರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿ.ವಿ. ಸಂಘದ ಉಪಾಧ್ಯಕ್ಷ ಶ್ರೀ ಜಾನೆಕುಂಟೆ ಬಸವರಾಜ ಮಾತನಾಡಿ, “ಒಬ್ಬ ವಿದ್ಯಾರ್ಥಿಯಾದರೂ ಈ ಕಾರ್ಯಾಗಾರದಿಂದ ಸ್ಫೂರ್ತಿಗೊಂಡು ಸಂಶೋಧನೆಯ ಪಥಕ್ಕೆ ಕಾಲಿಟ್ಟರೆ, ಅದೇ ಈ ಕಾರ್ಯಕ್ರಮದ ಸಾರ್ಥಕತೆ” ಎಂದರು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ, ಬೆಂಗಳೂರಿನ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನ ಡಾ. ಕಮ್ಮಾರ ಕಿಶೋರ್ ಕುಮಾರ್ ಮಾತನಾಡಿ, “ವಿದ್ಯಾರ್ಥಿಗಳ ಪ್ರಾಜೆಕ್ಟ್‌ಗಳು ಕೇವಲ ಅಂಕಗಳಿಗಾಗಿ ಇರಬಾರದು; ಅವು ಭವಿಷ್ಯದ ತಂತ್ರಜ್ಞಾನದ ತಳಹದಿಯಾಗಬೇಕು” ಎಂದರು. ಕಾರ್ಯಾಗಾರದಲ್ಲಿ ಮೆಕಾನಿಕಲ್ ವಿಭಾಗದ ಪ್ರಾಧ್ಯಾಪಕ ಡಾ. ವೀರಭದ್ರಪ್ಪ ಆಲಗೂರು ಮಾತನಾಡಿ, “ಇಂತಹ ಕಾರ್ಯಾಗಾರಗಳು ಯುವ ಸಂಶೋಧಕರಿಗೆ ದಾರಿದೀಪವಾಗುತ್ತವೆ. ಸಂಶೋಧನೆಯ ಅವಕಾಶಗಳು ಎಲ್ಲೆಡೆ ಇವೆ, ಆದರೆ ಅವುಗಳನ್ನು ಗುರುತಿಸಲು ಆವಿಷ್ಕಾರಕ ದೃಷ್ಟಿಯ ಅಗತ್ಯವಿದೆ,” ಎಂದರು.
ಪ್ರಾಂಶುಪಾಲ ಡಾ. ಹನುಮಂತರೆಡ್ಡಿ, ಉಪ ಪ್ರಾಂಶುಪಾಲರು, ಇಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥೆ ಡಾ. ಸವಿತಾ ಸೋನೋಳಿ, ಮೆಕಾನಿಕಲ್ ವಿಭಾಗದ ಮುಖ್ಯಸ್ಥ ಡಾ. ಕೋರಿ ನಾಗರಾಜ್, ಕಾರ್ಯಕ್ರಮದ ಸಂಯೋಜಕ ಡಾ. ಚಂದ್ರಗೌಡ ಮತ್ತಿತರರು ಉಪಸ್ಥಿತರಿದ್ದರು. ವಿಭಾಗದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು.
WhatsApp Group Join Now
Telegram Group Join Now
Share This Article