ಜಮಖಂಡಿ;ಪ್ರವಾದಿ ಮೊಹಮದ್ ಪೈಗಂಬರ್ ಅವರ 1500ನೇ ಜನ್ಮದಿನದ ಅಂಗವಾಗಿ ಆಚರಿಸಲ್ಪಡುವ ಈದ್ ಮಿಲಾದ್ ಹಬ್ಬವನ್ನು ಸೆ.4 ರಿಂದಲೇ ವಿಜೃಂಭಣೆಯಿಂದ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮೊಮಿನಗಲ್ಲಿಯ ಮಸೀದಿಯ ಅಧ್ಯಕ್ಷ ಆಜಮ ಅವಟಿ , ಮುಖಂಡರಾದ ರಫೀಕ್ ಬಾರಿಗಡ್ಡಿ ತಿಳಿಸಿದರು. ಬುಧವಾರ ರಮಾನಿವಾಸ ನಿರೀಕ್ಷಣಾ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ದ ಅವರು, ಗುರುವಾರ ಶಾಲಾ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಬೆಳಿಗ್ಗೆ 9 ಗಂಟೆಯಿಂದ ಸಂಜೆ 5ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನಗರದ ಎಲ್ಲ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನಾ ಕಾರ್ಯಕ್ರಮಗಳ ನ್ನು ಹಮ್ಮಿಕೊಳ್ಳಲಾಗಿದೆ. ಸಮಾಜದ ಎಲ್ಲರೂ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ರಫಿಕ್ ಬಾರಿಗಡ್ಡಿಯವರು ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಅಲ್ಪೋಪಹಾರ, ಹಣ್ಣು ಹಂಪಲುಗಳನ್ನು ವಿತರಿಸಲಿದ್ದಾರೆ. ಜಾಗರಣೆ ಕಾರ್ಯಕ್ರಮದ ಅಂಗವಾಗಿ ಎಲ್ಲ ಮಸೀದಿಗಳಲ್ಲಿ ಸಿಹಿ ಪದಾರ್ಥಗಳ ವಿತರಣೆ ನಡೆಯಲಿದೆ.
ಶುಕ್ರವಾರ ಹಬ್ಬದ ದಿನ ಸೆ.5 ರಂದು ನಗರದ ಶಾ ಆಲಂ ಗೇಟ್‌ನಿಂದ ಬೃಹತ್ ಮರವಣಿಗೆ ನಡೆಯಲಿದೆ ಅಂದು ನಗರದ ಓಲೇಮಠ, ಮುತ್ತಿನಕಂತಿಮಠ, ಸೇರಿದಂತೆ ವಿವಿಧ ಮಠಾಧೀಶರ ಸಾನಿಧ್ಯದಲ್ಲಿ ಶಾಸಕ ಜಗದೀಶ ಗುಡಗುಂಟಿ, ಮಾಜಿ ಶಾಸಕ ಆನಂದ ನ್ಯಾಮಗೌಡ, ಸಮಾಜದ ಪ್ರಮುಖರು, ಮೌಲ್ವಿಗಳು ಹಾಗೂ ವಿವಿಧ ಗಣ್ಯರ ಸನ್ಮಾನ ಹಾಗೂ ಮಠಾಧೀಶರಿಂದ ಮೆರವಣಿಗೆಗೆ ಚಾಲನೆ ನೀಡುವ ಕಾರ್ಯಕ್ರಮ ನಡೆಯಲಿದೆ ಹಳೆಯ ತಹಸೀಲ್ದಾರ ಕಚೇರಿ, ಜೋಳದ ಬಜಾರ, ಹನುಮಾನ ಚೌಕ, ಅಶೋಕ ಸರ್ಕಲ್, ದೇಸಾಯಿ ಸರ್ಕಲ್, ಮುಖಾಂತರ ಮೆರವಣಿಗೆ ಸಾಗಿ ಬರಲಿದ್ದು ಮುಧೋಳದ ರಸ್ತೆಯ ಮಡ್ಡಿ ಈದ್ಗಾ ವರೆಗೆ ಮೆರವಣಿಗೆ ನಡೆಯಲಿದ್ದು ಅಲ್ಲಿ ಸಾಮೂಹಿಕ ಪ್ರಾರ್ಥನಾ ಕಾರ್ಯಕ್ರಮ ನಡೆಯಲಿದೆ. ಸೆ.5 ಶುಕ್ರವಾರ ನಮಾಜ ಇರುವದರಿಂದ ಸಂಜೆ ಸಾರ್ವಜನಿಕರಿಗೆ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.
ಪ್ರವಾದಿ ಮೊಹಮದ್ ಪೈಗಂಬರರು ಶಾಂತಿ ಸಂದೇಶವನ್ನು ಸಾರಿದ್ದಾರೆ. ಹಸಿವಿನಿಂದ ಬಳಲುವವರಿಗೆ ಮೊದಲು ಅನ್ನ ನೀಡುವಂತೆ ಆದೇಶ ಮಾಡಿದ್ದಾರೆ ಅದರಂತೆ ಅವರ ಮೇಲೆ ಕಸ ಎಸೆಯುತ್ತಿದ್ದ ಮಹಿಳೆಯನ್ನು ಆದರಿಸಿದ್ದಾರೆ. ಒಗ್ಗಟ್ಟಿನಿಂದ ಶಾಂತಿ, ಸಹಬಾಳುವೆ ಯಿಂದ ಜೀವನ ನಡೆಸುವಂತೆ ಸೂಚಿಸಿರುವ ಅವರ ಮಾರ್ಗದರ್ಶನದಲ್ಲಿ ಸಮಾಜ ಹಬ್ಬವನ್ನು ಆಚರಿಸಲಿದೆ ಎಂದು ಹೇಳಿದರು. ಯುನೂಸ್ ಅಸ್ಮಿ ಅವರು ಮಾತನಾಡಿ ದಿ.5 ರಂದು ಸರಿಯಾದ 8.30ಕ್ಕೆ ಪ್ರಾರಂಭವಾಗುವ ರ್ಯಾಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸುವಂತೆ ಕೋರಿದರು. ದೇಶದ ಏಕತೆ, ಶಾಂತಿಗಾಗಿ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ ಎಂದು ಹೇಳಿದರು. ನಗರ ಯೋಜನಾಪ್ರಾಧಿಕಾರದ ಅಧ್ಯಕ್ಷ ಅನ್ವರ ಮೋಮಿನ ಸಿರಿಯತ್ ಕಮೀಟಿ ಅಧ್ಯಕ್ಷ ಕುತಬುದ್ದೀನ ವಿಜಾಪೂರ, ದಾವೂದ ಅವಟಿ, ಮುಂತಾದವರಿದ್ದರು. ಅಬುಬಕರ ಕುಡಚಿ ಸ್ವಾಗತಿಸಿ, ವಂದಿಸಿದರು.