ಬೆಂಗಳೂರು, ಮಾರ್ಚ್ 10: ವಿಧಾನಸಭಾ ಅಧಿವೇಶನದಲ್ಲಿ (Assembly session) ಇಂದು ಗ್ರೇಟರ್ ಬೆಂಗಳೂರು ವಿಧೇಯಕ ಬಗ್ಗೆ ಬಿಸಿ ಬಿಸಿ ಚರ್ಚೆ ಮಾಡಲಾಯಿತು. ವಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ವಿಧೇಯಕ ಮಂಡನೆಗೆ ವಿರೋಧ ವ್ಯಕ್ತಡಿಸಿದರು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನ (BBMP) ವಿಭಾಗಿಸಿ ಗ್ರೇಟರ್ ಬೆಂಗಳೂರು ಮಾಡಲು ಹೊರಟಿರುವ ಸರ್ಕಾರ, ಜಟಾಪಟಿ ನಡುವೆ ವಿಧೇಯಕಕ್ಕೆ ಅಂಗೀಕಾರ ಪಡೆದಿದೆ. ಈ ವೇಳೆ ಧಿಕ್ಕಾರ ಕೂಗುತ್ತಾ ವಿಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದರು. ಆದರೆ ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಸೋಮಶೇಖರ್ ಮಾತ್ರ ಸಭಾತ್ಯಾಗ ಮಾಡಿಲಿಲ್ಲ.
ಗದ್ದಲ ಮಧ್ಯೆ ಗ್ರೇಟರ್ ಬೆಂಗಳೂರು ವಿಧೇಯಕ ಅಂಗೀಕಾರ

ಪಾಲಿಕೆ ವಿಭಾಗಿಸಬೇಕು. ಎರಡು ಭಾಗ ಮಾಡಬೇಕು. ಮೂರು ಭಾಗ ಮಾಡಬೇಕು. ವಾರ್ಡ್ಗಳನ್ನ ಹೆಚ್ಚಿಸಬೇಕು ಅನ್ನೋ ಕಾಲಾಹರಣದ ನಡುವೆ ಕಳೆದ ಐದು ವರ್ಷಗಳಿಂದ ಬಿಬಿಎಂಪಿಗೆ ಚುನಾವಣೆಯೇ ನಡೆದಿಲ್ಲ. ಇದರ ನಡುವೆ ಬೆಂಗಳೂರನ್ನ ಹಲವು ಭಾಗ ಮಾಡಿ ಗ್ರೇಟರ್ ಬೆಂಗಳೂರು ಮಾಡಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿತ್ತು. ಇದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು. ಈ ವಿರೋಧದ ನಡುವೆ ಡಿಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್, ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ-2024 ನ್ನ ವಿಧಾನಸಭೆಯಲ್ಲಿ ಮಂಡಿಸಿದರು.