ಬೆಂಗಳೂರು, ಆಗಸ್ಟ್ 30: ಕರ್ನಾಟಕದಲ್ಲಿ ಎಚ್1ಎನ್1 ಪ್ರಕರಣಗಳ ಸಂಖ್ಯೆ ಈ ವರ್ಷ ಕಳೆದ ವರ್ಷಕ್ಕೆ ಹೋಲಿಸಿದರೆ ಏಳು ಪಟ್ಟು ಹೆಚ್ಚಾಗಿದೆ ಎಂಬುದು ಆರೋಗ್ಯ ಇಲಾಖೆಯ ಅಂಕಿಅಂಶಗಳಿಂದ ತಿಳಿದುಬಂದಿದೆ. ಈ ವರ್ಷ ಜುಲೈ 31 ರವರೆಗೆ ರಾಜ್ಯಾದ್ಯಂತ 855 ಪ್ರಕರಣಗಳು ವರದಿಯಾಗಿದ್ದು, ಬೆಂಗಳೂರಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಜುಲೈ ವೇಳೆಗೆ ರಾಜ್ಯಾದ್ಯಂತ 118 ಪ್ರಕರಣಗಳು ವರದಿಯಾಗಿದ್ದವು.
ಆರೋಗ್ಯ ಇಲಾಖೆಯು ಎಚ್1ಎನ್1 ಬಗ್ಗೆ ಸಕ್ರಿಯ ಕಣ್ಗಾವಲು ಇಟ್ಟಿಲ್ಲ. ಆದಾಗ್ಯೂ ಹೆಚ್ಚಿನ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳು ಮತ್ತು ಹೆಚ್ಚಿದ ಟೆಸ್ಟಿಂಗ್ ಪ್ರಕರಣಗಳ ಟ್ರ್ಯಾಕಿಂಗ್ ಮತ್ತು ನಿಯಂತ್ರಣಕ್ಕೆ ಸಹಾಯ ಮಾಡಿದೆ ಎಂದು ಇಂಟಿಗ್ರೇಟೆಡ್ ಡಿಸೀಸ್ ಸರ್ವೈಲೆನ್ಸ್ ಪ್ರೋಗ್ರಾಂನ ಯೋಜನಾ ನಿರ್ದೇಶಕ ಡಾ.ಅನ್ಸಾರ್ ಅಹಮದ್ ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ನಾವು ಪ್ರಕರಣಗಳ ಬಗ್ಗೆ ಕೂಲಂಕಷವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ ಮತ್ತು ನಮ್ಮ ದಾಖಲೀಕರಣ ಪ್ರಕ್ರಿಯೆಯನ್ನು ಸುಧಾರಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಜ್ವರದ ಕಾರಣ ಆಸ್ಪತ್ರೆಗಳಿಗೆ ಭೇಟಿ ನೀಡುವವರ ಸಂಖ್ಯೆ ಬೆಂಗಳೂರಿನಲ್ಲಿ ಗಣನೀಯವಾಗಿ ಹೆಚ್ಚಾಗಿದೆ. ಒಂದು ಪಾಳಿಯಲ್ಲಿ ಸುಮಾರು 30 ರೋಗಿಗಳನ್ನು ನೋಡಿದರೆ, ಅವರಲ್ಲಿ ಕನಿಷ್ಠ 20 ಜನರು ಜ್ವರ ರೋಗಲಕ್ಷಣಗಳೊಂದಿಗೆ ಬರುತ್ತಿದ್ದಾರೆ ಎಂದು ಬೆಂಗಳೂರಿನ ನಾಗರಭಾವಿಯಲ್ಲಿರುವ ಖಾಸಗಿ ಆಸ್ಪತ್ರೆಯ ಶ್ವಾಸಕೋಶಶಾಸ್ತ್ರ ತಜ್ಞ ಡಾ.ಮಜೀದ್ ಪಾಷಾ ಹೇಳಿದ್ದಾರೆ. ಕಳೆದ ಒಂದು ತಿಂಗಳಲ್ಲಿ, ಎಚ್1ಎನ್1 ಪತ್ತೆಯಾದ ಸುಮಾರು 70 ರೋಗಿಗಳ ಪೈಕಿ 25 ಕ್ಕೂ ಹೆಚ್ಚು ಮಂದಿಗೆ ಆಮ್ಲಜನಕ ನೀಡಬೇಕಾಯಿತು. 7-10 ಜನರಿಗೆ ವೆಂಟಿಲೇಟರ್ ಅಳವಡಿಬೇಕಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ.