ಜನಪ್ರೀಯತೆಯ ಹೆಸರು ʼಲೂಸ್ ಮಾದʼ ಈಗ ಸಿನಿಮಾ   

Ravi Talawar
ಜನಪ್ರೀಯತೆಯ ಹೆಸರು ʼಲೂಸ್ ಮಾದʼ ಈಗ ಸಿನಿಮಾ   
WhatsApp Group Join Now
Telegram Group Join Now
  ಕನ್ನಡದ ಅತ್ಯಂತ ಜನಪ್ರಿಯ ಚಿತ್ರಗಳಲ್ಲಿ ಒಂದಾದ ‘ದುನಿಯಾ’ ಚಿತ್ರದಲ್ಲಿ ಲೂಸ್ ಮಾದ ಎಂಬ ಪಾತ್ರದಲ್ಲಿ ಯೋಗೇಶ್ ಅವರು ನಟಿಸಿದ್ದರು. ಆ ಪಾತ್ರ ಪ್ರೇಕ್ಷಕರ ಮನೆಗೆದ್ದಿತು ಅಂದಿನಿಂದಲೂ ಲೂಸ್ ಮಾದ ಯೋಗೇಶ್ ಅಂತಲೇ ಜನಪ್ರಿಯರಾದರು.  ‘ಲೂಸ್ ಮಾದ’ ಹೆಸರೇ ಈಗ  ಚಿತ್ರದ ಶೀರ್ಷಿಕೆಯಾಗಿದೆ.  ನಾಯಕನಾಗಿ ಯೋಗೇಶ್ ಅವರೇ ಅಭಿನಯಿಸುತ್ತಿದ್ದಾರೆ.
     ಜಾನಕಿ ಕಂಬೈನ್ಸ್ ಲಾಂಛನದಲ್ಲಿ ಧರ್ಮೇಂದ್ರ ಅವರು ನಿರ್ಮಿಸುತ್ತಿರುವ ‘ಲೂಸ್ ಮಾದ’ ಚಿತ್ರವನ್ನು ರಂಜಿತ್ ಕುಮಾರ್ ಗೌಡ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಮುಹೂರ್ತ ಸಮಾರಂಭ ಬೆಂಗಳೂರಿನ  ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ನೆರವೇರಿದೆ. ಯೋಗೇಶ್ ಅವರ ತಂದೆ, ನಿರ್ಮಾಪಕ ಟಿ.ಪಿ.ಸಿದ್ದರಾಜು ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ಚಿತ್ರದ ನಿರ್ಮಾಪಕ ಧರ್ಮೇಂದ್ರ ಅವರು ಕ್ಯಾಮೆರಾ ಚಾಲನೆ ಮಾಡಿದರು.  ಉದಯ್ ಶೆಟ್ಟಿ, ಉಮೇಶ್ ಶೆಟ್ಟಿ, ರಘು ಗುಜ್ಜಲ್, ಸಾಹಿತ್ಯ ಯೋಗೇಶ್
ಮುಂತಾದವರು ಸಮಾರಂಭಕ್ಕೆ  ಆಗಮಿಸಿದ್ದರು.
     “ನಾನು ಮೂಲತಃ ಮಂಗಳೂರಿನವನು. ವೃತ್ತಿಯಲ್ಲಿ ಕಂಟ್ರ್ಯಾಕ್ಟರ್” ಎಂದು ಮಾತನಾಡಿದ ನಿರ್ಮಾಪಕ ಧರ್ಮೇಂದ್ರ “ಸಿನಿಮಾರಂಗ ನನಗೆ‌ ಹೊಸತು. ಕೆಲವು ಸ್ನೇಹಿತರು ಈ ಚಿತ್ರವನ್ನು ನಿರ್ಮಾಣ ಮಾಡಿ ಅಂತ ಹೇಳಿದರು. ನಿರ್ದೇಶಕರು ಹೇಳಿದ ಕಥೆಯೂ ಇಷ್ಟವಾಯಿತು. ಜೊತೆಗೆ ನಾನು ಲೂಸ್ ಮಾದ ಯೋಗೇಶ್ ಅವರ ಅಭಿಮಾನಿ. ಅವರೆ ನಮ್ಮ ಚಿತ್ರದ ನಾಯಕರಾಗಿರುವುದು ಖುಷಿಯಾಗಿದೆ.  ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ” ಎಂದರು.
     “ಲೂಸ್ ಮಾದ’ ನನ್ನ‌ ನಿರ್ದೇಶನದ ಮೂರನೇ‌ ಚಿತ್ರ. ಈ ಚಿತ್ರಕ್ಕೆ ‘The Wolf’ ಎಂಬ ಅಡಿಬರಹವಿದೆ. ಇದೊಂದು ಕರಾವಳಿ ಭಾಗದಲ್ಲಿ ನಡೆಯುವ ಕಥೆ. ಉಡುಪಿ, ಸುರತ್ಕಲ್ ಹಾಗೂ ಮಂಗಳೂರಿನಲ್ಲಿ ಚಿತ್ರೀಕರಣವಾಗಲಿದೆ. ಆಗಸ್ಟ್ 25 ರಿಂದ ಚಿತ್ರೀಕರಣ ಆರಂಭವಾಗಲಿದೆ. ಯೋಗೇಶ್ ಅವರು ಹಲವು ವರ್ಷಗಳ ಪರಿಚಯ. ಅವರಿಗೆ ಈ ಚಿತ್ರದ ಕಥೆ ಹೇಳಿದೆ. ನಾಯಕನಾಗಿ ನಟಿಸಲು ಒಪ್ಪಿಕೊಂಡರು. ಧರ್ಮೇಂದ್ರ ಅವರು ನಿರ್ಮಾಣಕ್ಕೆ ಮುಂದಾದರು. ಎಲ್ಲಾ ಪ್ರಾಣಿಗಳಿಗಿಂತ ತೋಳವನ್ನು ಪಳಗಿಸುವುದು ಸ್ವಲ್ಪ ಕಷ್ಟ. ಅದು ಯಾರ ಮಾತನ್ನು ಕೇಳದ ಪ್ರಾಣಿ.  ನಮ್ಮ ಚಿತ್ರದಲ್ಲಿ ನಾಯಕನ ಸ್ವಭಾವವೂ ಇದೇ ರೀತಿ. ಯಾವುದಕ್ಕೂ ಹಾಗೂ ಯಾರಿಗೂ ಅಂಜದ ಹುಡುಗ. ಈ ಹಿಂದೆ ಯೋಗೇಶ್ ಅವರು ಮಾಡಿರುವ ಪಾತ್ರಗಳಿಗಿಂತ ಭಿನ್ನ ಪಾತ್ರ. ಕಿಶೋರ್ ಅವರು ಸಹ ಈ ಚಿತ್ರದ ಮುಖ್ಯಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.  ಆದಿ ಲೋಕೇಶ್, ಅಚ್ಯುತ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ತಾರಾಬಳಗದಲ್ಲಿದ್ದಾರೆ”
ಎಂದು ನಿರ್ದೇಶಕ ರಂಜಿತ್ ಕುಮಾರ್ ಗೌಡ ತಿಳಿಸಿದರು.
     “ನನ್ನ ಸ್ನೇಹಿತರ ಮೂಲಕ ನಿರ್ಮಾಪಕ ಧರ್ಮೇಂದ್ರ ಅವರು ಪರಿಚಯವಾದರು‌‌. ನಿರ್ದೇಶಕರು ಹೇಳಿದಂತೆ ನನಗೆ ಅವರು ಬಹಳ ವರ್ಷಗಳ ಪರಿಚಯ. ಈ ಹಿಂದೆ ನಮ್ಮಿಬ್ಬರ ಕಾಂಬಿನೇಶನ್ ನಲ್ಲಿ‌ ಕಂಸ ಎಂಬ ಸಿನಿಮಾ ಆರಂಭವಾಗಬೇಕಿತ್ತು. ಕಾರಣಾಂತರದಿಂದ ಆ ಸಿನಿಮಾ ವಿಳಂಬವಾಯಿತು. ಈಗ ‘ಲೂಸ್ ಮಾದ’ ಸಿನಿಮಾ ಶುರುವಾಗಿದೆ‌‌. ಈ ಶೀರ್ಷಿಕೆಯನ್ನಿಟ್ಟುಕೊಂಡು ಹಿಂದೆ ಸಾಕಷ್ಟು ನಿರ್ಮಾಪಕರು ಚಿತ್ರ ಮಾಡಲು ಮುಂದಾಗಿದ್ದರು. ನಾನೇ ಬೇಡ ಎನ್ನುತ್ತಿದ್ದೆ. ಆದರೆ ಈ ಕಥೆ ಶೀರ್ಷಿಕೆಗೆ ಪೂರಕವಾಗಿದೆ. ದುನಿಯಾ ಸಿನಿಮಾದ ಲೂಸ್ ಮಾದ ನ‌ ಪಾತ್ರಕ್ಕೂ ಈ ಚಿತ್ರದ ಪಾತ್ರಕ್ಕೂ ಸಂಬಂಧ ಇರುವುದಿಲ್ಲ . ಅನುಭವಿ ತಂತ್ರಜ್ಞರು, ಕಲಾವಿದರು ಇರುವ  ‘ಲೂಸ್ ಮಾದ’ ಚಿತ್ರ ನೋಡುಗರಿಗೆ ಮನೋರಂಜನೆಯ ರಸದೌತಣ ನೀಡುವುದು ಖಂಡಿತ” ಎಂದು ನಾಯಕ ಲೂಸ್ ಮಾದ ಯೋಗೇಶ್ ತಿಳಿಸಿದರು.
     “ಯೋಗೇಶ್ ಜೊತೆಗೆ ಅಭಿನಯಿಸುತ್ತಿರುವುದು ಖುಷಿಯಾಗಿದೆ. ಪಾತ್ರದ ಬಗ್ಗೆ ಹೆಚ್ಚು ಹೇಳುವ ಹಾಗಿಲ್ಲ‌” ಎಂದರು ನಟ ಆದಿ ಲೋಕೇಶ್.
ಸಂಗೀತ ನಿರ್ದೇಶಕ ಶಶಾಂಕ್ ಶೇಷಗಿರಿ, ಛಾಯಾಗ್ರಾಹಕ ಪ್ರದೀಪ್ ರೆಡ್ಡಿ, ಸಂಕಲನಕಾರ ರಂಜನ್, ಕಾರ್ಯಕಾರಿ ನಿರ್ಮಾಪಕ ಪವನ್ ಕುಮಾರ್ ಉಡುಪಿ ಹಾಗೂ ಚಿತ್ರದಲ್ಲಿ ಅಭಿನಯಿಸುತ್ತಿರುವ ವಿವಾನ್ ಆಕರ್ಷ್, ರಿತೇಶ್ ಮುಂತಾದವರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article