ವಿ.ಡಿ.ಕೆ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ವಿನಯ್ ವಾಸುದೇವ್ ನಿರ್ದೇಶನದ ಜೊತೆಗೆ ನಾಯಕನಾಗೂ ನಟಿಸಿರುವ ‘ದಿ’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ.
ಹಿರಿಯ ನಟ ಮಂಡ್ಯ ರಮೇಶ್ ‘ದಿ’ ಚಿತ್ರದ ಟ್ರೇಲರ್ ಅನಾವರಣ ಮಾಡಿ, ಚಿತ್ರ ಯಶಸ್ವಿ ಪ್ರದರ್ಶನ ಕಾಣಲಿ ಎಂದು ಹಾರೈಸಿದರು. ‘ದಿ’ ಚಿತ್ರ ಟ್ರೇಲರ್ ನಲ್ಲೇ ಸಾಕಷ್ಟು ಕುತೂಹಲ ಮೂಡಿಸುತ್ತದೆ.
“ನಮ್ಮ ಚಿತ್ರಕ್ಕೆ ‘ದಿ’ ಎಂದು ಹೆಸರಿಡಲು ಮೂರು ಜನ ಮುಖ್ಯ ಕಾರಣ. ಒಂದು ನಟ ಕಿಚ್ಚ ಸುದೀಪ್. ಇನ್ನಿಬ್ಬರು ನನ್ನ ಗುರುಗಳು. ನಾನು ಸುದೀಪ್ ಅವರ ಅಭಿಮಾನಿ ಹಾಗೂ ಇನ್ನಿಬ್ಬರು ನಮ್ಮ ಗುರುಗಳ ಹೆಸರಿನಲ್ಲೂ ದಿ ಅಕ್ಷರವಿದೆ ಮತ್ತು ಚಿತ್ರದಲ್ಲೂ ನಾಯಕನ ಹೆಸರು ದೀಪು. ನಮ್ಮ ‘ದಿ’ ಚಿತ್ರದ ನಾಯಕಿ ಹೆಸರು ದಿಶಾ ರಮೇಶ್. ಈ ಎಲ್ಲಾ ಕಾರಣಗಳಿಂದ ನಮ್ಮ ಚಿತ್ರಕ್ಕೆ ‘ದಿ’ ಎಂದು ಶೀರ್ಷಿಕೆ ಇಡಲಾಗಿದೆ. ಹಾಗಾಗಿ ಇದು ಇಂಗ್ಲೀಷ್ ‘ದಿ’ ಅಲ್ಲ. ಕನ್ನಡದ ‘ದಿ’. ಇನ್ನೂ ಈ ಚಿತ್ರದ ಶೇಕಡಾ 80% ರಷ್ಟು ಭಾಗದ ಚಿತ್ರೀಕರಣ ಕಾಡಿನಲ್ಲೇ ನಡೆಯುತ್ತದೆ. ದೇವರಾಯನ ದುರ್ಗ, ದೇವರಮನೆ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಚಿತ್ರೀಕರಣವಾದ ಸ್ಥಳಗಳ ಹೆಸರಿನಲ್ಲೂ ದ ಅಕ್ಷರವಿದೆ. ಹೀಗೆ ಹಲವು ವಿಶೇಷಗಳಿರುವ ಈ ಚಿತ್ರಕ್ಕೆ ನಾನೇ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದೇನೆ ಜೊತೆಗೆ ನಾಯಕನಾಗೂ ನಟಿಸಿದ್ದೇನೆ. ಚಿತ್ರತಂಡದ ಎಲ್ಲರ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಇದೇ ಮೇ 16 ರಂದು ತೆರೆ ಕಾಣಲಿದೆ. ಎಲ್ಲರೂ ನೋಡಿ. ಪ್ರೋತ್ಸಾಹ ನೀಡಿ” ಎಂದರು ನಾಯಕ ಹಾಗೂ ನಿರ್ದೇಶಕ ವಿನಯ್ ವಾಸುದೇವ್.
“ನನಗೆ ವಿನಯ್ ಅವರು ಕಥೆ ಹೇಳಿದಾಗ ಬಹಳ ಇಷ್ಟವಾಯಿತು. ನಂತರ ಟೀಸರ್ ನೋಡಿದ ಮೇಲಂತೂ ಅವರು ಹೇಳಿದಕ್ಕಿಂತ ಇನ್ನೂ ಚೆನ್ನಾಗಿ ಮೂಡಿ ಬಂದಿತ್ತು. ಒಳ್ಳೆಯ ತಂಡದ ಜೊತೆಗೆ ಕೆಲಸ ಮಾಡಿದ್ದು ಖುಷಿಯಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ” ಎಂದು ನಾಯಕಿ ದಿಶಾ ರಮೇಶ್ ತಿಳಿಸಿದರು.
ನಟಿ ಹರಿಣಿ ಶ್ರೀಕಾಂತ್, ನಟರಾದ ನಾಗೇಂದ್ರ ಅರಸ್, ಡಾಲಾ ಶರಣ್, ಕಲಾರತಿ ಮಹಾದೇವ್, ಛಾಯಾಗ್ರಾಹಕ ಅಲೆನ್ ಭರತ್ , ಸಂಕಲನಕಾರ ಸಿದ್ದಾರ್ಥ್ ಆರ್ ನಾಯಕ್ ಮತ್ತು ಸಂಗೀತ ನಿರ್ದೇಶಕ ಯು.ಎಂ.ಸ್ಟೀವನ್ ಸತೀಶ್ ಮುಂತಾದವರು ‘ದಿ’ ಚಿತ್ರದ ಕುರಿತು ಮಾತನಾಡಿದರು. ಮೇ 16 ರಂದು ಬಿಡುಗಡೆಯಾಗಲಿರುವ ಈ ಚಿತ್ರವನ್ನು ವಿಶಾಲ ಕರ್ನಾಟಕಕ್ಕೆ ವಿಜಯ್ ಫಿಲಂಸ್ ಅವರು ಹಂಚಿಕೆ ಮಾಡಲಿದ್ದಾರೆ.