ಲೋಕಾಯುಕ್ತ ಸಿಬ್ಬಂದಿ​​ ಕಂಡು ಕಮೋಡ್‌ಗೆ ಹಣ ಸುರಿದ ಅಧಿಕಾರಿ

Hasiru Kranti
ಲೋಕಾಯುಕ್ತ ಸಿಬ್ಬಂದಿ​​ ಕಂಡು ಕಮೋಡ್‌ಗೆ ಹಣ ಸುರಿದ ಅಧಿಕಾರಿ
WhatsApp Group Join Now
Telegram Group Join Now

ಧಾರವಾಡ/ವಿಜಯನಗರ: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ  ಲೋಕಾಯುಕ್ತ ಪೊಲೀಸರು ರಾಜ್ಯಾದ್ಯಂತ ಇಂದು (ಮಂಗಳವಾರ) ಬೆಳ್ಳಂಬೆಳಗ್ಗೆ ಹಲವು ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಧಾರವಾಡ, ಶಿವಮೊಗ್ಗ, ಮಂಡ್ಯ, ಚಿಕ್ಕಮಗಳೂರು, ಬೆಂಗಳೂರು ಸೇರಿ ವಿವಿಧೆಡೆ ದಾಳಿ ನಡೆಸಿರುವ ಅಧಿಕಾರಿಗಳು, ಪರಿಶೀಲನೆ ನಡೆಸುತ್ತಿದ್ದಾರೆ. ಲೋಕಾಯುಕ್ತ  ಸಿಬ್ಬಂದಿ ಕೆಲವೆಡೆ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಬೆಳಗಾವಿ ಕೃಷಿ ಇಲಾಖೆ ಜಂಟಿ ನಿರ್ದೇಶಕರಾಗಿರುವ ರಾಜಶೇಖರ್​ ಅವರ ಧಾರವಾಡದ ಸಿಲ್ವರ್ ಆರ್ಚೆಡ್ ಬಡಾವಣೆಯಲ್ಲಿರುವ ನಿವಾಸದ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ರಾಜಶೇಖರ್​​ಗೆ ಸೇರಿದ ಒಟ್ಟು ಮೂರು ಕಡೆ ರೇಡ್​​ ನಡೆದಿದೆ.  ಬೆಳಗಾವಿ ಕೃಷಿ ಇಲಾಖೆ ವಿಜಿಲೆನ್ಸ್ ವಿಭಾಗದ ಜಂಟಿ ನಿರ್ದೇಶಕರಾಗಿರುವ ರಾಜಶೇಖರ್​ ಅವರು, ಈ ಮುಂಚೆ ಧಾರವಾಡದಲ್ಲಿ ಸಹ ಜಂಟಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು.    ರಾಣಿ ಚೆನ್ನಮ್ಮ ನಗರದಲ್ಲಿರುವ ರಾಜಶೇಖರ್​ಗೆ ಸೇರಿದ ಖಾಸಗಿ ಕಚೇರಿ, ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮದ ಬಳಿಯ ಫಾರ್ಮ್ ಹೌಸ್ ಮೇಲೂ ದಾಳಿ ನಡೆಸಲಾಗಿದೆ. ಏಕಕಾಲಕ್ಕೆ ಮೂರು ಕಡೆ ದಾಳಿ ನಡೆಸಿದ್ದು, ಒಟ್ಟು ಆರು ಲೋಕಾ ಅಧಿಕಾರಿಗಳು ಕಾರ್ಯಾಚರಣೆ ಮಾಡಿ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಲೋಕಾಯುಕ್ತ ಸಿಬ್ಬಂದಿ ಕಂಡು ಬೆದರಿದ ರಾಜಶೇಖರ್​​ ಅವರು ಸುಮಾರು 50 ಸಾವಿರ ರೂ. ಹಣವನ್ನು ಕಮೋಡ್‌ಗೆ ಸುರಿದು ಫ್ಲಶ್​​ ಮಾಡಿದ್ದಾರೆ ಎನ್ನಲಾಗುತ್ತಿದೆ. ಸುಮಾರು ಅರ್ಧಗಂಟೆ ಹೆಚ್ಚು ಕಾಲ ಲೊಕಾಯುಕ್ತ ಅಧಿಕಾರಿಗಳನ್ನು ಮನೆ ಹೊರಗೆ ಕಾಯಿಸಿ ಬಳಿಕ ಬಾಗಿಲು ತೆಗೆದಿದ್ದಾರೆ ಎಂದು ತಿಳಿದುಬಂದಿದೆ.

ಶಿವಮೊಗ್ಗದ ಬಸವನಗುಡಿ ಪ್ರದೇಶದಲ್ಲಿರುವ ರೂಪ್ಲಾ ನಾಯ್ಕ್ ಅವರ ನಿವಾಸ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಬೆಂಗಳೂರಿನಲ್ಲಿ ಏಕ ಕಾಲದಲ್ಲಿ ದಾಳಿ ನಡೆದಿದ್ದು ಬಸವನಗುಡಿ ಮತ್ತು ಕೆಂಗೇರಿಯ ಮನೆ, ಶಿವಮೊಗ್ಗದ ಕಚೇರಿ, ಚಿಕ್ಕಮಗಳೂರು ಜಿಲ್ಲೆ ಸಖರಾಯಪಟ್ಟಣದ ನಿವಾಸದಲ್ಲೂ ಪರಿಶೀಲನೆ ನಡೆಸಿದ್ದಾರೆ. ಇಂದು ಬೆಳಗ್ಗೆಯಿಂದಲೇ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳು, ಬ್ಯಾಂಕ್ ಖಾತೆಗಳು, ಆಸ್ತಿಯ ದಾಖಲೆಗಳು ಸೇರಿ ವಿವಿಧ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಇದರ ಜೊತೆಗೆ, ರೂಪ್ಲಾ ನಾಯ್ಕ್ ಅವರ ಕುಟುಂಬ ನೆಲೆಸಿರುವ ಬೆಂಗಳೂರಿನ ನಿವಾಸದ ಮೇಲೂ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

ವಿಜಯನಗರ ಡಿಎಚ್‌ಒ ಡಾ. ಎಲ್.ಆರ್. ಶಂಕರ್ ನಾಯ್ಕ್ ಅವರ ಮನೆ, ಕಚೇರಿ ಹಾಗೂ ಪತ್ನಿ ನಿರ್ವಹಿಸುತ್ತಿರುವ ಖಾಸಗಿ ಆಸ್ಪತ್ರೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದರು.  ಡಿಎಚ್‌ಒ ಡಾ. ಎಲ್.ಆರ್. ಶಂಕರ್ ನಾಯ್ಕ್ ಅವರು ತಮ್ಮ ಮನೆಯ ಸಮೀಪ ಖಾಸಗಿ ಆಸ್ಪತ್ರೆಯನ್ನು ಸಹ ನಡೆಸುತ್ತಿದ್ದು, ಲೋಕಾಯುಕ್ತ ಅಧಿಕಾರಿಗಳು ಅಲ್ಲಿಗೆ ಸಹ ತೆರಳಿ ಪರಿಶೀಲನೆ ನಡೆಸಿದರು. ಡಿಎಚ್ಒ ಅವರ ಪತ್ನಿ ಈ ಆಸ್ಪತ್ರೆಯ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ.

 

WhatsApp Group Join Now
Telegram Group Join Now
Share This Article