ಬೆಂಗಳೂರು,17: ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ನಿನ್ನೆ (ಮೇ 16) ಪ್ರಮುಖ ಅಭ್ಯರ್ಥಿಗಳು ಹಾಗೂ ಹಲವಾರು ಪಕ್ಷೇತರರು ಉಮೇದುವಾರಿಕೆ ಸಲ್ಲಿಸಿದರು. ಇಂದು ನಾಮಪತ್ರ ಪರಿಶೀಲನಾ ಪ್ರಕ್ರಿಯೆ ನಡೆಯಲಿದೆ.
ಪಕ್ಷೇತರನಾಗಿ ರಘುಪತಿ ಭಟ್ ನಾಮಪತ್ರ: ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯನೂರು ಮಂಜುನಾಥ್ ನಾಮಪತ್ರ ಸಲ್ಲಿಸಿದ್ದು, ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಇತರರು ಜೊತೆಗಿದ್ದರು. ಸರ್ವ ಜನತಾ ಪಾರ್ಟಿಯಿಂದ ಜಿ.ಸಿ.ಪಟೇಲ್, ಭಾರತೀಯ ಜನತಾ ಪಕ್ಷದಿಂದ(ಬಿಜೆಪಿ) ಧನಂಜಯ್ ಸರ್ಜಿ ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಗಳಾಗಿ ಷಹರಾಜ್ ಮುಜಾಯಿದ್ ಸಿದ್ದಿಕಿ, ಷಡಾಕ್ಷರಪ್ಪ ಜಿ.ಆರ್., ಮಾಜಿ ಶಾಸಕ ಕೆ.ರಘುಪತಿ ಭಟ್ ಹಾಗೂ ರಂಗಸ್ವಾಮಿ ಎಂ. ನಾಮಪತ್ರ ಸಲ್ಲಿಸಿದ್ದಾರೆ
ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಜನತಾ ದಳ (ಜಾತ್ಯತೀತ) ಪಕ್ಷದಿಂದ ಕೆ.ವಿವೇಕಾನಂದ ನಾಮಪತ್ರ ಸಲ್ಲಿಸಿದರು. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಪ್ರತಿಪಕ್ಷ ನಾಯಕ ಆರ್.ಅಶೋಕ್, ಜೆಡಿಎಸ್ ನಾಯಕ ಜಿ.ಡಿ.ದೇವೇಗೌಡ ಹಾಗೂ ಮೈಸೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಇತರರು ಸಾಥ್ ನೀಡಿದರು. ಇನ್ನುಳಿದಂತೆ, ಕರ್ನಾಟಕ ಜನತಾ ಪಕ್ಷದಿಂದ ಎಂ.ನಾಗೇಂದ್ರಬಾಬು, ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ ವಾಟಾಳ್ ನಾಗರಾಜ್, ಪಕ್ಷೇತರ ಅಭ್ಯರ್ಥಿಗಳಾಗಿ ಕೆ.ಸಿ.ಪುಟ್ಟಸಿದ್ದ ಶೆಟ್ಟಿ, ನಾಗಮಲ್ಲೇಶ್, ಡಾ.ಅನಿಲ್ ಕುಮಾರ್ ಎಸ್., ಮಹೇಶ್ ಆರ್., ರಾಜು ಕೆ., ಎನ್.ಅಂಬರೀಶ್ ಹಾಗೂ ನಿಂಗರಾಜು ಎಸ್.ಉಮೇದುವಾರಿಕೆ ಸಲ್ಲಿಸಿದರು.
ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ನ ಕೆ.ಕೆ.ಮಂಜುನಾಥ್ ಕುಮಾರ್, ಪಕ್ಷೇತರ ಅಭ್ಯರ್ಥಿಗಳಾಗಿ ನಂಜೇಶ್ ಬಿ.ಆರ್., ನರೇಶ್ ಹೆಗ್ಗಡೆ ಹಾಗೂ ಕೆ.ಕೆ. ಮಂಜುನಾಥ್ ನಾಮಪತ್ರ ಸಲ್ಲಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯರಾಗಿದ್ದ ಆಯನೂರು ಮಂಜುನಾಥ್ ಮತ್ತು ಮರಿತಿಬ್ಬೇಗೌಡ ರಾಜೀನಾಮೆ ನೀಡಿರುವುದರಿಂದ ತೆರವಾಗಿರುವ ಎರಡು ಸ್ಥಾನ ಹಾಗೂ ಡಾ.ಚಂದ್ರಶೇಖರ ಬಿ.ಪಾಟೀಲ, ಎ. ದೇವೇಗೌಡ, ಡಾ.ವೈ.ಎ.ನಾರಾಯಣಸ್ವಾಮಿ, ಎಸ್.ಎಲ್.ಭೋಜೇಗೌಡ ಅವರ ಅವಧಿಯು ಜೂನ್ 21 ರಂದು ಕೊನೆಗೊಳ್ಳಲಿರುವ ಹಿನ್ನೆಲೆಯಲ್ಲಿ ಒಟ್ಟು 6 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.
ಜೂನ್ 3ರಂದು ಮತದಾನ: ನಾಮಪತ್ರ ವಾಪಸ್ ಪಡೆಯಲು ಮೇ 20 ಕೊನೆಯ ದಿನ. ಜೂನ್ 3ರಂದು ಬೆಳಗ್ಗೆ 8ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಜೂನ್ 6ರಂದು ಮತ ಎಣಿಕೆ ಇದೆ.