ನವದೆಹಲಿ, ಸೆಪ್ಟೆಂಬರ್ 25: ಭಾರತದ ಉದ್ಯೋಗಸೃಷ್ಟಿ ಪ್ರಕ್ರಿಯೆ ಉತ್ತಮವಾಗಿ ಸಾಗುತ್ತಿದೆ. ಇಪಿಎಫ್ ಸದಸ್ಯರ ಸಂಖ್ಯೆ ಸ್ಥಿರವಾಗಿ ಏರುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ. ಇಪಿಎಫ್ಒ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಜುಲೈ ತಿಂಗಳಲ್ಲಿ ಸೇರ್ಪಡೆಯಾದ ಸದಸ್ಯರ ಸಂಖ್ಯೆ ನಿವ್ವಳ 21.04 ಲಕ್ಷದಷ್ಟು ಇದೆ. ಹಿಂದಿನ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಈ ಬಾರಿ ನಿವ್ವಳ ಇಪಿಎಫ್ ಸದಸ್ಯರ ಸೇರ್ಪಡೆ ಶೇ. 5.6ರಷ್ಟು ಹೆಚ್ಚಾಗಿದೆ.
ಈ ವರ್ಷ (2025-26) ಇಪಿಎಫ್ ಸದಸ್ಯರ ಸೇರ್ಪಡೆ ಪ್ರಮಾಣ ತಿಂಗಳಿಂದ ತಿಂಗಳಿಗೆ ಏರುತ್ತಲೇ ಇರುವುದು ಗಮನಾರ್ಹ ಸಂಗತಿ. ಏಪ್ರಿಲ್ನಲ್ಲಿ 14.3 ಲಕ್ಷ, ಮೇ ತಿಂಗಳಲ್ಲಿ 14.6 ಲಕ್ಷ, ಜೂನ್ ತಿಂಗಳಲ್ಲಿ 19 ಲಕ್ಷ ಹಾಗೂ ಜುಲೈನಲ್ಲಿ 21 ಲಕ್ಷ ಸಂಖ್ಯೆಯಲ್ಲಿ ಇಪಿಎಫ್ ಸದಸ್ಯರ ಸೇರ್ಪಡೆಯಾಗಿದೆ. ಹೊಸ ಉದ್ಯೋಗಗಳ ಸೃಷ್ಟಿ ನಿರಂತರವಾಗಿ ಹೆಚ್ಚುತ್ತಿದೆ.


