ಆರೋಗ್ಯ ಕೇಂದ್ರಗಳಲ್ಲಿ 16 ಸಾವಿರಕ್ಕೂ ಅಧಿಕ ವೈದ್ಯಕೀಯ ಸಿಬ್ಬಂದಿಗಳ ಕೊರತೆ: ಹೈಕೋರ್ಟ್ ಕರ್ನಾಟಕ ಸರ್ಕಾರಕ್ಕೆ ತಾಕೀತು!

Ravi Talawar
ಆರೋಗ್ಯ ಕೇಂದ್ರಗಳಲ್ಲಿ  16 ಸಾವಿರಕ್ಕೂ ಅಧಿಕ ವೈದ್ಯಕೀಯ ಸಿಬ್ಬಂದಿಗಳ ಕೊರತೆ:  ಹೈಕೋರ್ಟ್ ಕರ್ನಾಟಕ ಸರ್ಕಾರಕ್ಕೆ ತಾಕೀತು!
WhatsApp Group Join Now
Telegram Group Join Now

ಬೆಂಗಳೂರು, ಮಾರ್ಚ್‌ 26: ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಸೇರಿದಂತೆ 16 ಸಾವಿರಕ್ಕೂ ಅಧಿಕ ವೈದ್ಯಕೀಯ ಸಿಬ್ಬಂದಿಗಳ ಕೊರತೆ ಸಂಬಂಧ ಉತ್ತರ ನೀಡುವಂತೆ ಹೈಕೋರ್ಟ್ ಕರ್ನಾಟಕ ಸರ್ಕಾರಕ್ಕೆ ತಾಕೀತು ಮಾಡಿದೆ. ರಾಜ್ಯದ ಎಲ್ಲಾ ಜಿಲ್ಲೆಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಂಬಿಬಿಎಸ್ ವೈದ್ಯರು ಸೇರಿದ 16 ಸಾವಿರಕ್ಕೂ ಹೆಚ್ಚು ವೈದ್ಯಕೀಯ, ಅರೆ ವೈದ್ಯಕೀಯ ಹಾಗೂ ‘ಡಿ’ ಗ್ರೂಪ್ ಸಿಬ್ಬಂದಿಯ ಕೊರತೆ ಬಗ್ಗೆ ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀ (ಎಫ್‌ಐಸಿಸಿಐ) ವರದಿಯೊಂದನ್ನು ಬಿಡುಗಡೆ ಮಾಡಿತ್ತು.

ವರದಿಯಲ್ಲಿ ರಾಜ್ಯದ ಪ್ರಾಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 723 ಎಂಬಿಬಿಎಸ್ ವೈದ್ಯರು, 7,492 ಶುಶ್ರೂಷಕಿಯರು, 1,517 ಲ್ಯಾಬ್ ಟೆಕ್ನಿಷಿಯನ್, 1512 ಫಾರ್ಮಾಸಿಸ್ಟ್‌, 1752 ಸಹಾಯಕರು, 3253 ಗ್ರೂಪ್ ಡಿ ನೌಕರರು ಸೇರಿ 16,500ಕ್ಕೂ ಹೆಚ್ಚು ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ, ತಾಂತ್ರಿಕ ಹಾಗೂ ‘ಡಿ’ ಗ್ರೂಪ್ ನೌಕರರ ಕೊರತೆ ಇದೆ. ರಾಜ್ಯದ ನಗರ ಪ್ರದೇಶಗಳಲ್ಲಿ 245 ಮತ್ತು ಗ್ರಾಮೀಣ ಪ್ರದೇಶದಲ್ಲಿ 209 ಸೇರಿ ಒಟ್ಟು 454 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕೊರತೆ ಇದೆ ಎಂದು ವರದಿ ಹೇಳಿತ್ತು. ಈ ವರದಿ ಆಧರಿಸಿ ಹೈಕೋರ್ಟ್ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿದೆ. ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎನ್. ವಿ. ಅಂಜಾರಿಯಾ ಹಾಗೂ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಾಯಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು.

ಅಮೈಕಸ್ ಕ್ಯೂರಿ ಹಿರಿಯ ವಕೀಲ ಶ್ರೀಧರ ಪ್ರಭು ವಾದ ಮಂಡಿಸಿ, ರಾಜ್ಯದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಸೇರಿದಂತೆ 16,500 ವೈದ್ಯಕೀಯ ಸಿಬ್ಬಂದಿ ಕೊರತೆ ಇದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹುದ್ದೆಗಳು ಖಾಲಿ ಇದ್ದು, ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೇವೆ ದುರ್ಲಭವಾಗಿದೆ. ಈ ನಡುವೆ ರಾಜ್ಯ ಸರ್ಕಾರ ವೈದ್ಯರ ಕಡ್ಡಾಯ ಗ್ರಾಮೀಣ ಸೇವೆ ಕಾಯ್ದೆಗೆ ತಿದ್ದುಪಡಿ ತಂದು, ಕಡ್ಡಾಯ ಸೇವೆಗೆ ವಿನಾಯ್ತಿ ನೀಡಿದೆ. ಇದರಿಂದ ಸಮಸ್ಯೆ ಇನ್ನಷ್ಟು ಉಲ್ಬಣಗೊಂಡಿದೆ ಎಂದರು.

ಕೊರತೆ ನೀಗಿಸಲು ಪರ್ಯಾಯ ವ್ಯವಸ್ಥೆ ಸರ್ಕಾರದ ಬಳಿ ಇಲ್ಲ. 16 ಸಾವಿರಕ್ಕೂ ಹೆಚ್ಚು ವೈದ್ಯಕೀಯ ಹುದ್ದೆಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬೆನ್ನಲಬು ಆಗಿರುವ ನರ್ಸ್, ಲ್ಯಾಬ್ ಟೆಕ್ನಿಷಿಯನ್, ಡಿ-ಗ್ರೂಪ್ ಹುದ್ದೆಗಳು ದೊಡ್ಡ ಸಂಖ್ಯೆಯಲ್ಲಿ ಖಾಲಿ ಇವೆ. ಇದು ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತಿದೆ. ನ್ಯಾಯಾಲಯ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದರು. ವಾದ ಆಲಿಸಿದ ನ್ಯಾಯಪೀಠ, ವಕೀಲರು ಪ್ರಸ್ತಾಪಿಸಿದ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿ ವಿಚಾರಣೆಯನ್ನು ಜೂನ್ ಮೊದಲ ವಾರಕ್ಕೆ ಮುಂದೂಡಿತು

WhatsApp Group Join Now
Telegram Group Join Now
Share This Article