ಬೆಂಗಳೂರು: ”ಮೈಸೂರು ಅಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರಪರಾಧಿ ಎಂಬುದಾಗಿ ಹೈಕೋರ್ಟ್ ಹೇಳಿಲ್ಲ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಶುಕ್ರವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ”ಮುಡಾ ಹಗರಣದಲ್ಲಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ರಾಜ್ಯ ಹೈಕೋರ್ಟ್ನಲ್ಲಿ ಸಂಪೂರ್ಣ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಕೋರಿದ್ದರು. ಆ ಅರ್ಜಿಯನ್ನು ರಾಜ್ಯ ಹೈಕೋರ್ಟ್ ತಿರಸ್ಕರಿಸಿದೆ” ಎಂದರು.
”ಸಿದ್ದರಾಮಯ್ಯ ಅವರನ್ನು ಆರೋಪಮುಕ್ತರನ್ನಾಗಿ ಹೈಕೋರ್ಟ್ ಮಾಡಿಲ್ಲ. ಸಿಬಿಐ ತನಿಖೆಗೆ ಕೊಡುವುದಿಲ್ಲ ಎಂಬ ತೀರ್ಪನ್ನು ಹೈಕೋರ್ಟ್ ಹೇಳಿದೆ. ಇದರಿಂದ ಮೈಸೂರಿನ ಮುಡಾ ಹಗರಣದ ವಿಷಯದಲ್ಲಿ ಸಿಎಂ ಕುಟುಂಬ ಭಾಗಿಯಾಗಿರುವ ಕುರಿತ ಬಿಜೆಪಿ ಹೋರಾಟ ಮತ್ತು ಪಾದಯಾತ್ರೆಗೆ ಹಿನ್ನಡೆ ಆಗಿಲ್ಲ” ಎಂದು ಹೇಳಿದರು.
”ಲೋಕಾಯುಕ್ತ ಮತ್ತು ಇ.ಡಿ. ತನಿಖೆ ನಡೆಯುತ್ತಿದೆ. ಮುಂದೇನಾಗುತ್ತದೆ ಕಾದು ನೋಡೋಣ” ಎಂದು ಅವರು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. ”ಹೈಕೋರ್ಟ್ ತನ್ನ ತೀರ್ಪಿನಲ್ಲಿ ಸಿಎಂ ಕುಟುಂಬ ನಿರಪರಾಧಿಗಳೆಂದು ಹೇಳಿದೆಯೇ?” ಎಂದು ಪ್ರಶ್ನಿಸಿದರು.