ಮತದಾರರಿಗೆ ಉಚಿತ ಸಾರಿಗೆ ವ್ಯವಸ್ಥೆಗೆ ಸರ್ಕಾರಕ್ಕೆ ಸೂಚಿಸುವ ಅಧಿಕಾರ ಚುನಾವಣಾ ಆಯೋಗಕ್ಕಿಲ್ಲ: ಹೈಕೋರ್ಟ್

Ravi Talawar
ಮತದಾರರಿಗೆ ಉಚಿತ ಸಾರಿಗೆ ವ್ಯವಸ್ಥೆಗೆ ಸರ್ಕಾರಕ್ಕೆ ಸೂಚಿಸುವ ಅಧಿಕಾರ ಚುನಾವಣಾ ಆಯೋಗಕ್ಕಿಲ್ಲ: ಹೈಕೋರ್ಟ್
WhatsApp Group Join Now
Telegram Group Join Now

ಬೆಂಗಳೂರು,18: ಮತ ಕೇಂದ್ರಗಳಿಗೆ ತೆರಳಿ ಮತದಾನ ಮಾಡಲು ಮತದಾರರಿಗೆ ಉಚಿತ ಬಸ್‌ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರ ಮತ್ತು ಸಾರಿಗೆ ಇಲಾಖೆಗೆ ಸೂಚಿಸಲು ಕೇಂದ್ರ ಚುನಾವಣಾ ಆಯೋಗಕ್ಕೆ ಅವಕಾಶ ಹಾಗೂ ಅಧಿಕಾರವಿಲ್ಲ ಎಂದು ಹೈಕೋರ್ಟ್‌ ಗುರುವಾರ ಅಭಿಪ್ರಾಯಪಟ್ಟಿದೆ.

ಹಾಲಿ ವಿಧಾನ ಪರಿಷತ್‌ ಚುನಾವಣೆ ಹಿನ್ನೆಲೆಯಲ್ಲಿ ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಮತದಾನ ಮಾಡಲು ಮತದಾರರಿಗೆ ಉಚಿತ ಬಸ್‌ ವ್ಯವಸ್ಥೆ ಕಲ್ಪಿಸಲು ಮತ್ತು ಮತಗಟ್ಟೆಗಳನ್ನು 160 ರಿಂದ 250ಕ್ಕೆ ಹೆಚ್ಚಿಸಲು ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶಿಸುವಂತೆ ಕೋರಿ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕು ನಿವಾಸಿ ಸಯ್ಯದ್‌ ಕಲೀಲ್‌ವುಲ್ಲಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಆರ್ ದೇವದಾಸ್‌ ಮತ್ತು ಜೆ ಎಂ ಖಾಜಿ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಅರ್ಜಿ ಪರಿಶೀಲಿಸಿದ ಪೀಠವು ಮತದಾನಕ್ಕಾಗಿ ಮತಕೇಂದ್ರಗಳಿಗೆ ತೆರಳಲು ಮತದಾರರಿಗೆ ಉಚಿತ ಬಸ್‌ ವ್ಯವಸ್ಥೆ ಕಲ್ಪಿಸಲು ಚುನಾವಣೆಗೆ ಆಯೋಗಕ್ಕೆ ಎಲ್ಲಿದೆ ಅವಕಾಶ? ಎಂದು ಪ್ರಶ್ನಿಸಿತು.

ಉಚಿತ ಬಸ್‌ ವ್ಯವಸ್ಥೆ ಮಾಡುವಂತೆ ಸರ್ಕಾರ ಮತ್ತು ಸಾರಿಗೆ ಇಲಾಖೆಗೆ ನಿರ್ದೇಶಿಸಲು ಚುನಾವಣೆ ಆಯೋಗಕ್ಕೆ ಎಲ್ಲಿದೆ ಅಧಿಕಾರ? ಒಂದೊಮ್ಮೆ ಸರ್ಕಾರ ಉಚಿತ ಬಸ್‌ ವ್ಯವಸ್ಥೆ ಮಾಡಿದರೆ ಆಡಳಿತಾರೂಢ ಪಕ್ಷ ಅಧಿಕಾರವನ್ನು ದುರ್ಬಳಕೆ ಮಾಡುತ್ತಿದೆ ಎಂಬ ಮಾತುಗಳು ಕೇಳಿ ಬರುವುದಿಲ್ಲವೇ ಎಂದು ಅರ್ಜಿದಾರರ ಪರ ವಕೀಲರನ್ನು ಪೀಠವು ಪ್ರಶ್ನಿಸಿತು.

ಉಚಿತ ಬಸ್‌ ವ್ಯವಸ್ಥೆ ಮಾಡಲು ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶಿಸಲು ನೀವು (ಅರ್ಜಿದಾರರು) ಕೋರಿದ್ದೀರಿ. ಅಂತಹ ವ್ಯವಸ್ಥೆ ಮಾಡಲು ಕಾನೂನಿನಲ್ಲಿ ಚುನಾವಣಾ ಆಯೋಗಕ್ಕೆ ಅವಕಾಶವಿದೆಯೇ ಎಂಬುದನ್ನು ಮೊದಲು ಪರಿಶೀಲನೆ ನಡೆಸುವುದು ನಿಮ್ಮ ಜವಾಬ್ದಾರಿ. ಪರಿಶೀಲನೆ ಮಾಡದೆ ಏಕಾಏಕಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರೆ ಹೇಗೆ, ಅರ್ಜಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ವಿಚಾರ ಇರಬಹುದು. ಆದರೆ, ಆ ವಿಚಾರದ ಕುರಿತ ಕಾನೂನುಗಳ ಬಗ್ಗೆ ಸಮಗ್ರವಾಗಿ ಅರ್ಜಿದಾರರು ತಿಳಿಯಬೇಕು ಎಂದು ನ್ಯಾಯಮೂರ್ತಿಗಳು ಸಲಹೆ ನೀಡಿದರು.

ಕೊನೆ ಕ್ಷಣದಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗುತ್ತದೆ. ಚುನಾವಣೆಗೆ ಅಧಿಸೂಚನೆ ಹೊರಡಿಸಿ ಹಲವು ದಿನ ಕಳೆದಿವೆ. ಈಗಾಗಲೇ ಚುನಾವಣೆ ಪ್ರಕ್ರಿಯೆ ಆರಂಭವಾಗಿದೆ. ಈ ಹಂತದಲ್ಲಿ ನ್ಯಾಯಾಲಯ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದರೆ ಹೇಗೆ ಸಾಧ್ಯ? ಮುಂಚಿತವಾಗಿ ಅರ್ಜಿ ಸಲ್ಲಿಸಿದರೆ, ಕನಿಷ್ಠ ಪಕ್ಷ ಸಂಬಂಧಪಟ್ಟವರಿಗೆ ನ್ಯಾಯಾಲಯ ನೋಟಿಸ್‌ ಜಾರಿಗೊಳಿಸಿ, ಅವರಿಂದ ಉತ್ತರ ಪಡೆಯಬಹುದು. ಸಾರ್ವಜನಿಕ ಹಿತಾಸಕ್ತಿಯಿಂದ ಅಗತ್ಯ ವ್ಯವಸ್ಥೆ ಮಾಡಲು ಸಾಧ್ಯವಿದೆಯೇ ಎಂಬ ಬಗ್ಗೆ ವಿಚಾರಿಸಬಹುದು ಎಂದು ನ್ಯಾಯಮೂರ್ತಿಗಳು ಹೇಳಿದರು.

ಕೇಂದ್ರ ಚುನಾವಣಾ ಆಯೋಗದ ಪರ ವಕೀಲ ಶರತ್‌ ದೊಡ್ಡವಾಡ ಆಕ್ಷೇಪಣೆ ಸಲ್ಲಿಸಿ, ಮತದಾರರಿಗೆ ಉಚಿತ ಬಸ್ ವ್ಯವಸ್ಥೆ ಮಾಡಲು ಜನಪ್ರತಿನಿಧಿಗಳ ಕಾಯಿದೆ ಸೆಕ್ಷನ್‌ 123(5) ಅಡಿಯಲ್ಲಿ ಆಯೋಗಕ್ಕೆ ನಿರ್ಬಂಧವಿದೆ. ಒಂದೊಮ್ಮೆ ಉಚಿತ ಬಸ್‌ ವ್ಯವಸ್ಥೆ ಕಲ್ಪಿಸಿದರೆ ಅದು ಕೆಟ್ಟ ರೂಢಿಯಾಗುತ್ತದೆ. ಹೀಗಾಗಿ, ಆ ಕುರಿತ ಅರ್ಜಿದಾರರ ಮನವಿ ಪರಿಗಣಿಸಲಾಗದು. ಇನ್ನು ಅರ್ಜಿ ಸಲ್ಲಿಕೆಯಾದ ನಂತರ ಈಶಾನ್ಯ ಪದವೀಧರರ ಕ್ಷೇತ್ರದಲ್ಲಿದ್ದ 160 ಮತಗಟ್ಟೆಗಳನ್ನು 195ಕ್ಕೆ ಹೆಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇದನ್ನು ಪರಿಗಣಿಸಿದ ಪೀಠವು ಚುನಾವಣಾ ಆಯೋಗವು ಸಲ್ಲಿಸಿದ ಆಕ್ಷೇಪಣೆಯಲ್ಲಿ ಅರ್ಜಿದಾರರು ಮಾಡಿರುವ ಎರಡು ಮನವಿಗಳಿಗೂ ಉತ್ತರ ನೀಡಲಾಗಿದೆ ಎಂದು ಅಭಿಪ್ರಾಯಪಟ್ಟು ಅರ್ಜಿ ಇತ್ಯರ್ಥಪಡಿಸಿತು

WhatsApp Group Join Now
Telegram Group Join Now
Share This Article