ಒಳಮೀಸಲಾತಿ ಜಾರಿಗೆ ಆಗ್ರಹ: ಸರ್ಕಾರದ ಅಣಕು ಶವಯಾತ್ರೆ ಆ.೧ ರಂದು ರಾಜ್ಯಾದ್ಯಂತ ಬೃಹತ್ ಹೋರಾಟ

Pratibha Boi
ಒಳಮೀಸಲಾತಿ ಜಾರಿಗೆ ಆಗ್ರಹ: ಸರ್ಕಾರದ ಅಣಕು ಶವಯಾತ್ರೆ ಆ.೧ ರಂದು ರಾಜ್ಯಾದ್ಯಂತ ಬೃಹತ್ ಹೋರಾಟ
WhatsApp Group Join Now
Telegram Group Join Now
ಫೋಮುದ್ದೇಬಿಹಾಳ: ಒಳಮೀಸಲಾತಿ ಜಾರಿಗೊಳಿಸುವಂತೆ ಸೂಚಿಸಿ ಸುಪ್ರಿಂಕೋರ್ಟ ಆದೇಶ ಹೊರಡಿಸಿ ವರ್ಷ ಕಳೆದರೂ ರಾಜ್ಯ ಸರ್ಕಾರ ಸದಾಶಿವ ಆಯೋಗದ ವರದಿಯನ್ವಯ ಒಳಮೀಸಲಾತಿ ಜಾರಿಗೊಳಿಸುತ್ತಿಲ್ಲ. ಇದನ್ನು ಖಂಡಿಸಿ ಆ.೧ ರಂದು ರಾಜ್ಯಾದ್ಯಂತ ಮಾದಿಗ ಸಮುದಾಯ ಸೇರಿದಂತೆ ಒಳಮೀಸಲಾತಿಯಡಿ ಬರುವ ಎಲ್ಲ ದಲಿತ ಸಮುದಾಯಗಳ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಒಳಮೀಸಲಾತಿ ಹೋರಾಟಗಾರರು ತಿಳಿಸಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮುಖಂಡರಾದ ಕೆ.ಬಿ.ದೊಡಮನಿ ವಕೀಲರು, ಕರ್ನಾಟಕ ಬಹುಜನ ಸಂಘದ ತಾಲೂಕು ಅಧ್ಯಕ್ಷ ಶೇಖರ ಮಾದರ ಆಲೂರ, ಭೀಮರಾಯ ಹುಲ್ಲೂರ, ಮಾರುತಿ ಸಿದ್ದಾಪುರ, ಆನಂದ ಮುದೂರ, ದುರಗಪ್ಪ ಗರಸಂಗಿ, ಬಾಲಚಂದ್ರ ಹುಲ್ಲೂರ, ಭಗವಂತ ಕಬಾಡೆ, ಆನಂದ ದೇವೂರ ಅವರು ಅಂದಿನ ಹೋರಾಟ ಕುಂಭಕರ್ಣ ನಿದ್ರೆಯಲ್ಲಿರುವ ಈ ಸರ್ಕಾರಕ್ಕೆ, ಮುಖ್ಯಮಂತ್ರಿಗಳಿಗೆ ಎಚ್ಚರಿಕೆಯ ಗಂಟೆಯಾಗಿರಲಿದೆ ಎಂದು ಪ್ರತಿಪಾದಿಸಿದರು.
ಸುಪ್ರಿಂಕೋರ್ಟ ಅನ್ನು ನ್ಯಾಯ ಕೊಡುವ ಅತ್ಯುನ್ನತ ಸಾಂವಿಧಾನಿಕ ಸಂಸ್ಥೆ ಎಂದು ನಾವೆಲ್ಲ ತಿಳಿದಿದ್ದೇವೆ. ಅಂಥ ಸಂಸ್ಥೆ ನೀಡಿದ ಆದೇಶ ಪಾಲಿಸಲು ಈ ಸರ್ಕಾರ ಹಿಂದೇಟು ಹಾಕುವ ಮೂಲಕ ನಮ್ಮ ಜನಾಂಗಕ್ಕೆ ಶತಮಾನಗಳಿಂದ ಆಗುತ್ತಿರುವ ಅನ್ಯಾಯವನ್ನು ಮುಂದುವರೆಸುತ್ತಿದೆ. ಕಳೆದ ೩-೪ ದಶಕಗಳ ಹೋರಾಟದ ಪರಿಣಾಮ ಸದಾಶಿವ ಆಯೋಗದ ರಚನೆಗೊಂಡು ಅಂತಿಮ ವರದಿಯಂತೆ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಹೋರಾಟ ನಡೆಸುತ್ತಲೇ ಬಂದಿದ್ದೇವೆ. ಆದರೂ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೂಲ ಅಸ್ಪೃಶ್ಯ ವರ್ಗಕ್ಕೆ ಸೇರಿರುವ ಎಡ, ಬಲ, ಹರಳಯ್ಯ, ಡೋಹರ ಸೇರಿ ಎಲ್ಲ ಸಮಾಜಗಳ ನಾಯಕರು ತಮ್ಮ ಸಮುದಾಯಗಳ ಪ್ರತಿನಿಧಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆತಂದು ಹೋರಾಟ ಯಶಸ್ವಿಗೊಳಿಸಬೇಕು. ಸಮಾಜದ ಸ್ವಾಭಿಮಾನ ಇರುವ ಎಲ್ಲ ಸಂಘಟನೆಗಳು ಈ ಹೋರಾಟ ಬೆಂಬಲಿಸಲಿವೆ ಎಂದು ತಿಳಿಸಿದರು.
ಗುರು ಚಲಮಿ, ಮಲ್ಲಪ್ಪ ಬಸರಕೋಡ, ಬಸಪ್ಪ ಕವಡಿಮಟ್ಟಿ, ದೇವೇಂದ್ರ ಡೊಂಕಮಡು, ಬಸವರಾಜ ವಣಕಿಹಾಳ, ಮುತ್ತು ಅಮರಗೋಳ, ಶಂಕ್ರಪ್ಪ ಪೂಜಾರಿ, ಯಮನಪ್ಪ ಮಾದರ, ಪರಶು ಅಮರಗೋಳ, ಮುತ್ತು ಸಿದ್ದಾಪುರ, ದುರಗಪ್ಪ ಅಮರಗೋಳ ಇನ್ನಿತರರು ಇದ್ದರು.
ಬಾಕ್ಸ್:
ಸರ್ಕಾರದ ಅಣಕು ಶವಯಾತ್ರೆ, ದಹನ:
ರಾಜ್ಯದ ಎಲ್ಲ ಜಿಲ್ಲೆ, ತಾಲೂಕು ಕೇಂದ್ರಗಳ ಜೊತೆಗೆ ಮುದ್ದೇಬಿಹಾಳದಲ್ಲೂ ಆ.೧ರಂದು ಬೃಹತ್ ಪ್ರತಿಭಟನೆ ಏರ್ಪಡಿಸಲಾಗಿದೆ. ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ತಮಟೆ ಚಳವಳಿಯೊಂದಿಗೆ ಸರ್ಕಾರದ ಅಣಕು ಶವಯಾತ್ರೆ ನಡೆಸಲಾಗುತ್ತದೆ. ಬಸವೇಶ್ವರ ವೃತ್ತದಲ್ಲಿ ಶವದ ಪ್ರತಿಕೃತಿ ದಹಿಸಿ ನಮ್ಮ ಆಕ್ರೋಶ ಹೊರಹಾಕುತ್ತೇವೆ. ಈ ಹೋರಾಟಕ್ಕೆ ಸರ್ಕಾರ ಸ್ಪಂಧಿಸದಿದ್ದಲ್ಲಿ ಮತ್ತೊಮ್ಮೆ ಇದಕ್ಕೂ ಹೆಚ್ಚಿನ ಮಟ್ಟದ ಬೃಹತ್ ಉಗ್ರ ಹೋರಾಟಕ್ಕೆ ಕರೆ ನೀಡುತ್ತೇವೆ ಎಂದು ಮುಖಂಡರು ತಿಳಿಸಿದರು.
WhatsApp Group Join Now
Telegram Group Join Now
Share This Article