ಬೆಂಗಳೂರು, ಆಗಸ್ಟ್ 23: ಬಳ್ಳಾರಿ ಬಳಿ ಜೆಎಸ್ಡಬ್ಲ್ಯೂ (ಜಿಂದಾಲ್) ಸ್ಟೀಲ್ ಕಂಪನಿಗೆ 3,667.31 ಎಕರೆ ಜಮೀನು ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ. ಈ ಹಿಂದಿನ ಬಿಜೆಪಿ ಸರ್ಕಾರ ಮಾರಾಟ ಮಾಡಲು ಮುಂದಾದಾಗ ನಾವು ವಿರೋಧ ಮಾಡಿದ್ದು ನಿಜ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದರು. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಾಗ ಮಾರಾಟ ಮಾಡುವುದಕ್ಕಿಂತ ಮುನ್ನ, ಜಿಂದಾಲ್ ಕಂಪನಿಗೆ ಕೆಲವು ಪ್ರಶ್ನೆಗಳನ್ನು ನಾವು ಕೇಳಿದ್ದೇವು. ಅದಕ್ಕೆ ಕಂಪನಿ ಸಮರ್ಪಕವಾಗಿ ಉತ್ತರ ನೀಡಿದೆ. ನ್ಯಾಯಾಲಯ ಕೂಡ ಆದೇಶ ಮಾಡಿದೆ. ಹೀಗಾಗಿ ಮಾರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.
ದಿ ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್ ಇನ್ವೆಸ್ಟ್ ಕರ್ನಾಟಕ ಕಾರ್ಯಕ್ರಮ ಮಾಡುತ್ತೇವೆ. ಪ್ರಪಂಚದಾದ್ಯಂತ ಇರುವ ಉದ್ಯಮಿಗಳು ಇದರಲ್ಲಿ ಭಾಗಿಯಾಗುತ್ತಾರೆ. ರಾಜ್ಯದಲ್ಲಿ ಕಂಪನಿ ಆರಂಭಿಸಲು ಅವರಿಗೆ ನೀರು, ಜಾಗ, ವಿದ್ಯುತ್ನಲ್ಲಿ ಒಂದಿಷ್ಟು ವಿನಾಯಿತಿ ನೀಡಲಾಗುತ್ತದೆ. ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಉಚಿತವಾಗಿ ಭೂಮಿ ಕೊಡುತ್ತಾರೆ. ಹೀಗಾಗಿ ನಮ್ಮಲ್ಲಿಯೂ ಕೂಡ ಕೆಲವು ವಿನಾಯಿತಿ ನೀಡಬೇಕಾಗುತ್ತದೆ. ಈ ಹಿಂದೆ ಒಂದಿಷ್ಟು ಘಟನೆ ನಡೆದಾಗ ಕಂಪನಿಗಳು ರಾಜ್ಯ ಬಿಟ್ಟು ಹೋಗುತ್ತೇವೆ ಅಂದವು. ಹೀಗಾಗಿ ವಿನಾಯಿತಿ ನೀಡಬೇಕಾಗುತ್ತದೆ ಎಂದು ತಿಳಿಸಿದರು.