ಗದಗ, ಜನವರಿ 13: ಉತ್ತರ ಕರ್ನಾಟಕ ಪ್ರಸಿದ್ಧ ಮಠ ವೀರೇಶ್ವರ ಪುಣ್ಯಾಶ್ರಮ ಅಂಧ, ಅನಾಥರ ಬಾಳಿನಲ್ಲಿ ನಂದಾದೀಪ. ಸಾವಿರಾರು ಅಂಧರ ಬಾಳಲ್ಲಿ ಸಂಗೀತದ ಜ್ಯೋತಿ ಬೆಳಗಿಸುವ ಮೂಲಕ ಶ್ರೀಮಠದ ಲಿಂಗೈಕ್ಯ ಪದ್ಮಭೂಷಣ ಡಾ. ಪಂಡಿತ ಪುಟ್ಟರಾಜ ಗವಾಯಿಗಳು ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದರು. ನಡೆದಾಡುವ ದೇವರ ಸ್ಮಾರಕ ಕಾಮಗಾರಿ ಶುರುವಾಗಿ 9 ವರ್ಷಗಳು ಉರುಳಿದರೂ, ಕಾಮಗಾರಿ ಮಾತ್ರ ಇನ್ನೂ ಪೂರ್ಣವಾಗಿಲ್ಲ. ಸರ್ಕಾರ ಅನುದಾನ ನೀಡುತ್ತಿಲ್ಲ. ಕಾಮಗಾರಿ ಅರ್ಧಕ್ಕೆ ನಿಂತಿದೆ. ಹೀಗಾಗಿ ಭಿಕ್ಷಾಟನೆ ಮೂಲಕ ಹಣ ಸಂಗ್ರಹಿಸಿ, ಸ್ಮಾರಕ ಭವನ ನಿರ್ಮಾಣಕ್ಕೆ ಭಕ್ತರು ಮತ್ತು ಜೆಡಿಎಸ್ ಕಾರ್ಯಕರ್ತರು ಮುಂದಾಗಿದ್ದಾರೆ.
ಗದಗ ಶಾಸಕ ಹೆಚ್.ಕೆ ಪಾಟೀಲ್ 2016ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ 5 ಕೋಟಿ ಅನುದಾನ ತರುವಲ್ಲಿ ಹಚ್ಚಿನ ಕಾಳಜಿ ವಹಿಸಿದರು. ಲೋಕೋಪಯೋಗಿ ಇಲಾಖೆ ಮೂಲಕ ಮಹಾರಾಷ್ಟ್ರ ಮೂಲದ ಶಿರ್ಕೆ ಕನ್ಸಸ್ಟ್ರಕ್ಷನ್ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ಆದರೆ, 9 ವರ್ಷಗಳು ಕಳೆದು ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೂ ಸ್ಮಾರಕ ಭವನದ ಕಾಮಗಾರಿ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. 5 ಕೋಟಿಯ ಅನುಮೋದನೆ ನೀಡಿದ್ದ ಕಟ್ಟಡ 6.25 ಕೋಟಿ ಖರ್ಚು ಮಾಡಿದರೂ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಕಾಮಗಾರಿ ಅರ್ಧಕ್ಕೆ ನಿಂತು ಹೋಗಿದೆ. ಹತ್ತಾರು ಬಾರಿ ಮನವಿ ಮಾಡಿದರೂ, ಅನುದಾನ ಮಾತ್ರ ಬಿಡುಗಡೆ ಮಾತ್ರಯಾಗಿಲ್ಲ. ಹೀಗಾಗಿ ಜೆಡಿಎಸ್ ಮುಖಂಡರು ಭಿಕ್ಷಾಟನೆ ಮೂಲಕ ಹಣ ಸಂಗ್ರಹಿಸಿ ಸರ್ಕಾರಕ್ಕೆ ನೀಡಲು ಮುಂದಾಗಿದ್ದಾರೆ. ಈ ಮೂಲಕ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.