ಕ್ಷೇತ್ರಗಳ ಅನುದಾನ ಹಂಚಿಕೆಯಲ್ಲಿ ಬಿಜೆಪಿ ತಾರತಮ್ಯ ಆರೋಪ: ಜು.27ಕ್ಕೆ ಸರ್ವಪಕ್ಷ ಸಭೆ ಕರೆದ ಸರ್ಕಾರ

Ravi Talawar
ಕ್ಷೇತ್ರಗಳ ಅನುದಾನ ಹಂಚಿಕೆಯಲ್ಲಿ ಬಿಜೆಪಿ ತಾರತಮ್ಯ ಆರೋಪ: ಜು.27ಕ್ಕೆ ಸರ್ವಪಕ್ಷ ಸಭೆ ಕರೆದ ಸರ್ಕಾರ
WhatsApp Group Join Now
Telegram Group Join Now

ಬೆಂಗಳೂರು: ಕ್ಷೇತ್ರಗಳ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಶಾಸಕರು ವಿಧಾನಸಭೆಯಲ್ಲಿ ಗದ್ದಲ ಎಬ್ಬಿಸಿದ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ ಜು.27ಕ್ಕೆ ಸರ್ವಪಕ್ಷ ಸಭೆ ನಡೆಸಲು ಮುಂದಾಗಿದೆ.

ವಿಧಾನಸಭೆಯಲ್ಲಿ ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಕೆ.ಸಿ.ರಾಮಮೂರ್ತಿ ಅವರ ಪ್ರಶ್ನೆಗೆ ಉತ್ತರ ನೀಡಿದ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು, ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ, ರಸ್ತೆ ಗುಂಡಿ, ಕುಡಿಯುವ ನೀರು, ತ್ಯಾಜ್ಯ ನಿರ್ವಹಣೆ ಸೇರಿದಂತೆ ಸಾಕಷ್ಟು ಸಮಸ್ಯೆಗಳಿವೆ. ಇವುಗಳ ಪರಿಹಾರಕ್ಕೆ ಬ್ರ್ಯಾಂಡ್‌ ಬೆಂಗಳೂರು ಯೋಜನೆಯಡಿ ಇನ್ನಷ್ಟು ರಸ್ತೆಗಳಿಗೆ ವೈಟ್‌ಟಾಪಿಂಗ್‌, ಸುರಂಗ ಮಾರ್ಗ ನಿರ್ಮಾಣ, ರಸ್ತೆ ಅಗಲೀಕರಣ, ಇಂಟಿಗ್ರೇಟೆಡ್‌ ಮೆಟ್ರೋ ರೋಡ್‌ ಪ್ಲೈ ಓವರ್‌ ಸೇರಿದಂತೆ ಬಿಬಿಎಂಪಿಯಿಂದ ರೂ.00 ಕೋಟಿ ಮತ್ತು ಸರ್ಕಾರದಿಂದ ರೂ.1660 ಕೋಟಿ ಮೊತ್ತದ ಹಲವು ಕಾಮಗಾರಿಗಳನ್ನು ರೂಪಿಸಲಾಗಿದೆ. ಸ್ಪೀಕರ್‌ ಅನುಮತಿ ಕೊಟ್ಟರೆ ಇವುಗಳ ಬಗ್ಗೆ ಈ ಸದನದಲ್ಲೇ ಒಂದು ಇಡೀ ದಿನ ಚರ್ಚಿಸೋಣ. ಅಥವಾ ಸದನ ಮುಗಿದ ಬಳಿಕ ಒಂದು ಸಭೆ ಕರೆಯುತ್ತೇನೆ. ಸಮಗ್ರವಾಗಿ ಚರ್ಚಿಸೋಣ. ನಗರದ ಎಲ್ಲಾ ಶಾಸಕರೂ ತಮ್ಮ ಸಲಹೆ, ಅಭಿಪ್ರಾಯಗಳನ್ನು ನೀಡಿ ಎಂದು ಹೇಳಿದರು. ಇದಕ್ಕೆ ಸ್ಪೀಕರ್‌ ನೀವು ಸದನದ ಹೊರಗೇ ಈ ಬಗ್ಗೆ ಸಭೆ ಕರೆಯುವುದು ಸೂಕ್ತ ಎಂದರು.

ಬಳಿಕ ಬಿಜೆಪಿ ನಾಯಕರು ಬೆಂಗಳೂರು ಅಭಿವೃದ್ಧಿಗೆ ಇರುವ ಇಲಾಖೆಗಳ ನಡುವೆ ಸಮನ್ವಯತೆ ಕೊರತೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಡಿಸಿಎಂ, ಅಶೋಕ್, ಸುರೇಶ್ ಕುಮಾರ್ ಹಾಗೂ ರಾಮಮೂರ್ತಿ ಅವರ ಮಾತಿಗೆ ನನ್ನ ಸಹಮತವಿದೆ. ಕಳೆದ ಒಂದು ವರ್ಷದಿಂದ ಸಮನ್ವಯತೆ ಸಾಧಿಸಲು ನಾನೇ ಸಾಕಷ್ಟು ಕಸರತ್ತು ನಡೆಸಿದ್ದೇನೆ. ಇದರಲ್ಲಿ ಸಂಪೂರ್ಣ ಯಶಸ್ವಿಯಾಗಿಲ್ಲ. ಆದರೆ, ಒಂದು ಹಂತಕ್ಕೆ ಸಮಸ್ಯೆ ನಿವಾರಣೆ ಮಾಡಿದ್ದೇನೆ. ಪ್ರಯತ್ನ ಮುಂದುವರೆಸಿದ್ದೇನೆ. ಪ್ರತಿಪಕ್ಷದವರು ಸಹಕಾರ ನೀಡಿದರೆ ಕಸ ವಿಲೇವಾರಿ, ಕುಡಿಯುವ ನೀರು, ಸಂಚಾರ ದಟ್ಟಣೆ, ಬೀದಿ ದೀಪ, ತೆರಿಗೆ ಸಂಗ್ರಹ, ಹಸಿರೀಕರಣ – ಹೀಗೆ ಅನೇಕ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಬಹುದು. ಇದಕ್ಕಾಗಿ ಅಧಿವೇಶನ ಮುಗಿದ ಮರುದಿನ ಜು.27ರಂದು ಸರ್ವ ಪಕ್ಷ ಶಾಸಕರ ಸಭೆ ಕರೆಯುವುದಾಗಿ ತಿಳಿಸಿದರು.

WhatsApp Group Join Now
Telegram Group Join Now
Share This Article