. “ತಂತ್ರಜ್ಞಾನ ಪ್ರಗತಿಯ ಜೊತೆಗೆ ಡಿಜಿಟಲ್ ಪ್ಲಾಟ್ ಫಾರ್ಮ್ಗಳ ಅಭಿವೃದ್ಧಿಯು ವಾಣಿಜ್ಯದ ಸ್ವರೂಪವನ್ನು ಸಂಪೂರ್ಣವಾಗಿ ಬದಲಾಯಿಸಿದೆ; ಆನ್ಲೈನ್ ಶಾಪಿಂಗ್ ನಂತಹ ಅನುಕೂಲತೆಗಳು ಗ್ರಾಹಕರನ್ನು ಸೆಳೆಯುತ್ತ ಎಲ್ಲಾ ಬಗೆಯ ಸೇವೆಗಳನ್ನು ಒಳಗೊಳ್ಳುತ್ತಿದೆ; ಹೀಗಾಗಿ ಭವಿಷ್ಯವು ಇ- ಕಾಮರ್ಸ್ ಗೆ ಸೇರಿದೆ”, ಎಂದು ಡಾ. ಡಿ. ಎಚ್ ರಾವ್ ಅಭಿಪ್ರಾಯಪಟ್ಟರು. ಅವರು ಬೆಳಗಾವಿಯ ಸಂಗೋಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ವಾಣಿಜ್ಯ ವಿಭಾಗವು ಇ -ಕಾಮರ್ಸ್ ಕುರಿತು ಏರ್ಪಡಿಸಿದ್ದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಅಂತರ್ಜಾಲದ ಮೂಲಕ ಸರಕು ಮತ್ತು ಸೇವೆಗಳ ಖರೀದಿ ಮತ್ತು ಮಾರಾಟದ ವ್ಯವಹಾರಗಳು,ಗ್ರಾಹಕರ ನಡುವಿನ ಮತ್ತು ವ್ಯವಹಾರಗಳ ನಡುವಿನ ವಹಿವಾಟುಗಳನ್ನು ಒಳಗೊಳ್ಳುತ್ತದೆ ಈ ವಹಿವಾಟುಗಳನ್ನು ಸುಗಮಗೊಳಿಸಲು ವೆಬ್ಸೈಟ್ಗಳು ಮೊಬೈಲ್ ಅಪ್ಲಿಕೇಶನ್ಗಳು ಮತ್ತು ಸಾಮಾಜಿಕ ಮಾಧ್ಯಮಗಳಂತಹ ಆನ್ಲೈನ್ ಪ್ಲಾಟ್ ಫಾರ್ಮ್ ಗಳನ್ನು ಇದು ಸುಲಭಗೊಳಿಸಿದೆ ಎಂದು ಡಾ. ರಾವ್ ವಿವರಿಸಿದರು.
ಆಶಯ ಭಾಷಣ ಮಾಡಿದ ಧಾರವಾಡದ ಎಸ್ ಡಿ ಎಂ ತಾಂತ್ರಿಕ ವಿಶ್ವವಿದ್ಯಾಲಯದ ವ್ಯವಹಾರ ಅಧ್ಯಯನದ ನಿರ್ದೇಶಕರು ಡಾ. ಪ್ರಕಾಶ್ ಹೆಚ್ ಎಸ್ ಅವರು ಇ- ವಾಣಿಜ್ಯವು ಎಲೆಕ್ಟ್ರಾನಿಕ್ಸ್ ಉದ್ಯಮದ ಅತಿ ದೊಡ್ಡ ವಲಯವಾಗಿದೆ. ಅದು ಮಾರುಕಟ್ಟೆ ವ್ಯಾಪ್ತಿಯನ್ನು ವಿಸ್ತರಿಸುತ್ತದೆ, ವೆಚ್ಚವನ್ನು ಕಡಿಮೆ ಮಾಡುತ್ತದೆ, ಎಲ್ಲ ಗ್ರಾಹಕರಿಗೂ ಮತ್ತು ಮಾರಾಟಗಾರರಿಗೂ ಅನುಕೂಲವನ್ನು ನೀಡುತ್ತದೆ, ಜಾಗತಿಕ ವೈವಾಟುಗಳು ಸಕ್ರಿಯಗೊಳಿಸುತ್ತದೆ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ ಸಂಗೋಳ್ಳಿ ರಾಯಣ್ಣ ಕಾಲೇಜಿನ ಪ್ರಾಚಾರ್ಯ ಎಂ. ಜಿ. ಹೆಗಡೆ ಅವರು ಡಿಜಿಟಲ್ ಆರ್ಥಿಕತೆ ಸಮಾನ ಸ್ಪರ್ಧಾ ವೇದಿಕೆ ಅಲ್ಲ. ಆದ್ದರಿಂದ ಇ-ಕಾಮರ್ಸ್ ಅನಿವಾರ್ಯವಾಗಿ ಡಿಜಿಟಲ್ ವಿಭಜನೆಯನ್ನು ವಿಸ್ತರಿಸುತ್ತದೆ. ಹೀಗಾಗಿ
ಇ-ಕಾಮರ್ಸ್ನ ಯಶಸ್ಸಿನ ಕಥೆಗಳ ಆಚೆ
ನೋಡುವುದು ಹಾಗೂ ಕಥಾನಕಗಳನ್ನು ಪ್ರಶ್ನಿಸುವುದು ಅಗತ್ಯವಿದೆ ಎಂದರು. ಗೋಷ್ಠಿ ಒಂದರಲ್ಲಿ ಇ- ಕಾಮರ್ಸ್ ಉದ್ಯಮದಲ್ಲಿ ಮಹಿಳಾ ನಾಯಕತ್ವದ ಕುರಿತು ಉದ್ಯಮಿ ದೀಪಾಲಿ ಗೊಟಡ್ಕೆ ಮಾತನಾಡಿದರು. ಗೋಷ್ಠಿ ಎರಡರಲ್ಲಿ ವಿಟಿಯು ಸಹ ಪ್ರಾಧ್ಯಾಪಕ ಡಾ. ಬಸವರಾಜ ಕುಡಚಿಮಠ ಅವರು ಇ- ಕಾಮರ್ಸ್ ಪ್ಲಾಟ್ ಫಾರ್ಮಗಳು ಸ್ಥಳೀಯ ವ್ಯವಹಾರಗಳ ವಿಶಾಲ ಪ್ರೇಕ್ಷಕರನ್ನು ತಲುಪಲು ಅನುವು ಮಾಡಿಕೊಡುತ್ತದೆ ಅಷ್ಟಲ್ಲದೆ ಭೌಗೋಳಿಕ ಗಡಿಗಳನ್ನು ಮೀರಿ ಬೆಳೆಯತೊಡಗಿದ್ದು ವಿತರಣೆ ಮತ್ತು ಗ್ರಾಹಕರ ಜೀವನದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಸಣ್ಣ ಉದ್ಯಮಗಳನ್ನು ಸೃಷ್ಟಿಸಿದೆ ಎಂದು ಹೇಳಿದರು.
ಈ ವೇಳೆ ಮಹಾವಿದ್ಯಾಲಯದ ಬೋಧಕ, ಬೋಧಕೇತರ ವರ್ಗ, ವಿದ್ಯಾರ್ಥಿಗಳು, ವಿವಿಧ ಕಾಲೇಜಿನ ಅಧ್ಯಾಪಕ ವೃಂದ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಹಾಜರಿದ್ದರು.
ಕು. ಪ್ರಿಯಾಂಕಾ ತಿಳಗಾರ ವಿದ್ಯಾರ್ಥಿನಿ ಪ್ರಾರ್ಥಿಸಿದರು. ವಾಣಿಜ್ಯ ಶಾಸ್ತ್ರದ ಉಪನ್ಯಾಸಕ ಶ್ರೀ ಲಖತ್ ಅತ್ತರ್ ಸ್ವಾಗತಿಸಿದರು.ಕು. ಜಯಶ್ರೀ ಉಪರಿ ವಾಣಿಜ್ಯ ಶಾಸ್ತ್ರದ ಉಪನ್ಯಾಸಕಿ ಅತಿಥಿಗಳನ್ನು ಪರಿಚಯಿಸಿದರು ಶ್ರೀ ವಾಣಿಜ್ಯ ಶಾಸ್ತ್ರದ ಉಪನ್ಯಾಸಕ ನಾರಾಯಣ್ ಗಂಟಿ ವಂದಿಸಿದರು. ಡಾ. ಮುಕುಂದ ಮುಂಡರಗಿ ಸಂಕಿರಣದ ಸಂಯೋಜಕರು ಉಪಸ್ಥಿತರಿದ್ದರು. ಸೃಷ್ಟಿ ಸರ್ವದೆ ಹಾಗೂ ಸೃಷ್ಟಿ ತಂಗಡೆ ನಿರೂಪಿಸಿದರು.