ಬೆಂಗಳೂರು, ಜುಲೈ 24: ಬೆಂಗಳೂರಿನ ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ ಸ್ಫೋಟಕ ಪತ್ತೆ ವಿಚಾರವಾಗಿ ತನಿಖೆಗೆ ಕಲಾಸಿಪಾಳ್ಯ ಠಾಣೆ ಪೊಲೀಸರಿಂದ ಆರು ತಂಡಗಳ ರಚನೆ ಮಾಡಲಾಗಿದೆ. ಸಿಸಿಬಿ, ಇಂಟೆಲಿಜೆನ್ಸ್, ಎಟಿಸಿ ತಂಡದಿಂದಲೂ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಜಿಲೆಟಿನ್ ಕಡ್ಡಿ ಜೊತೆಗೆ ಡಿಟೋನೆಟರ್ಗಳು ಕೂಡ ಪತ್ತೆ ಆಗಿದ್ದವು. ಈ ಬಗ್ಗೆ ಕಲಾಸಿಪಾಳ್ಯ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಕಲಾಸಿಪಾಳ್ಯ ಬಸ್ ನಿಲ್ದಾಣದ ಶೌಚಾಲಯದ ಸಮೀಪ ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸ್ಫೋಟಕ ಪತ್ತೆಯಾಗಿತ್ತು. ಸ್ಥಳಕ್ಕೆ ಪೊಲೀಸರು, ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ ದೌಡಾಯಿಸಿ ಪರಿಶೀಲನೆ ನಡೆಸಿದ್ದವು. ಆ ಸಂದರ್ಭಧಲ್ಲಿ ಒಂದು ಬ್ಯಾಗ್ನಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದ್ದವು. ಜಿಲೆಟಿನ್ ಕಡ್ಡಿ ಜೊತೆಗೆ ಕೆಲವು ಡಿಟೋನೆಟರ್ಗಳು ಕೂಡ ಪತ್ತೆಯಾಗಿದ್ದವು.
ಬೆಂಗಳೂರು ಸ್ಫೋಟಕ ಪತ್ತೆ; ತನಿಖೆಗೆ 6 ತಂಡಗಳ ರಚನೆ

6 ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ. ವ್ಯಕ್ತಿಯೊಬ್ಬ ಈ ಬ್ಯಾಗ್ನ ಜೊತೆ ಕುಳಿತಿರುವುದು ಕಂಡುಬಂದಿದ್ದು, ಬಂಡೆ ಒಡೆಯುವ ಕೆಲಸಗಾರರು ಬಿಟ್ಟುಹೋಗಿರುವ ಶಂಕೆ ಉಂಟಾಗಿದೆ. ಉದ್ದೇಶಪೂರ್ವಕವಾಗಿ ಬಿಟ್ಟು ಹೋಗಿದ್ದಾರೆಯೇ ಅಥವಾ ಮರೆತು ಹೋಗಿದ್ದಾರೆಯೇ ಎಂಬುದನ್ನನು ಪರಿಶೀಲಿಸಲಾಗುತ್ತಿದೆ ಎಂದು ಪಶ್ಚಿಮ ವಿಭಾಗ ಡಿಸಿಪಿ ಗಿರೀಶ್ ಮಾಹಿತಿ ನೀಡಿದ್ದರು.
ಬೆಳಗ್ಗೆ 10 ಗಂಟೆ ಸುಮಾರಿಗೆ ಓರ್ವ ವ್ಯಕ್ತಿ ಶೌಚಾಲಯಕ್ಕೆಂದು ಬಂದು ಕೈಯಲ್ಲಿದ್ದ ಚೀಲವನ್ನು ಶೌಚಾಲಯದ ಮುಂಭಾಗದಲ್ಲೇ ಇಟ್ಟು ಹೋಗಿದ್ದ. ಆದರೆ ಮಧ್ಯಾಹ್ನ 2 ಗಂಟೆವರೆಗೆ ಚೀಲ ಅಲ್ಲೇ ಇದ್ದು, ಯಾರೂ ಕೂಡ ಗಮನಿಸಿರಲಿಲ್ಲ. ಬಳಿಕ ಚೀಲ ಗಮನಿಸಿದ ಶೌಚಾಲಯದ ಸಿಬ್ಬಂದಿ ಬಸ್ ನಿಲ್ದಾಣದ ಸೆಕ್ಯೂರಿಟಿಗಳಿಗೆ ಮಾಹಿತಿ ನೀಡಿದ್ದು, ಸೆಕ್ಯೂರಿಟಿ ಸಿಬ್ಬಂದಿಗಳು ಪೊಲೀಸರಿಗೆ ಸಂದೇಶ ನೀಡಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಸ್ಫೋಟಕಗಳು ಪತ್ತೆಯಾಗಿವೆ.