ಮೊದಲ ಹಂತದ ಮತದಾನ: ಕೆಲವೆಡೆ ಗೊಂದಲ ಗಲಾಟೆಗಳು

Ravi Talawar
ಮೊದಲ ಹಂತದ ಮತದಾನ: ಕೆಲವೆಡೆ ಗೊಂದಲ ಗಲಾಟೆಗಳು
WhatsApp Group Join Now
Telegram Group Join Now

ಬೆಂಗಳೂರು, ಏಪ್ರಿಲ್ 26: ಲೋಕಸಭೆ ಚುನಾವಣೆಯ  ಮೊದಲ ಹಂತದ ಮತದಾನ ರಾಜ್ಯದ 14 ಕ್ಷೇತ್ರಗಳಲ್ಲಿ ನಡೆಯುತ್ತಿದೆ. ಇದೇ ವೇಳೆ, ಕೆಲವೆಡೆ ಗೊಂದಲ ಗಲಾಟೆಗಳು ನಡೆದಿವೆ. ಮಂಡ್ಯದಲ್ಲಿ ಮತದಾನ ಯಂತ್ರ ಕೈ ಕೊಟ್ಟಿದ್ದರಿಂದ ಬೆಳಗ್ಗೆಯೇ ಗೊಂದಲ ಸೃಷ್ಟಿಯಾಗಿತ್ತು.

ಮಂಗಳೂರಲ್ಲಿ ಬಿಜೆಪಿ ಕಾರ್ಯಕರ್ತರ ರಂಪಾಟದಿಂದ ಕೆಲ ಕಾಲ ಆತಂಕದ ಸನ್ನಿವೇಶ ಸೃಷ್ಟಿಯಾಗಿತ್ತು. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಗ್ಯಾರಂಟಿ ಕಾರ್ಡ್​ ಹಂಚಿದ ಆರೋಪ ಕೇಳಿ ಬಂದಿದ್ದು, ಇನ್ನು ಕೆಲವೆಡೆ ಮತದಾನ ದಿನವೂ ಕಾಂಗ್ರೆಸ್ ಕಾರ್ಯಕರ್ತರು ಚೊಂಬು ಅಭಿಯಾನ ನಡೆಸಿದ್ದಾರೆ.

ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರು ರಂಪಾಟ ಮಾಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಮತ ಚಲಾಯಿಸಿ ಹೊರ ಬಂದಾಗ, ಈ ರಂಪಾಟ ನಡೆದಿದೆ. ಬಿಜೆಪಿ ಕಾರ್ಯಕರ್ತರು ಪೊಲೀಸ್ ಅಧಿಕಾರಿಯನ್ನೇ ತಳ್ಳಿ ವಾಗ್ವಾದ ನಡೆಸಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡ ಸ್ಥಳದಲ್ಲಿದ್ದ ಪೊಲೀಸರು ಮತಗಟ್ಟೆಯಲ್ಲಿದ್ದ ಬಿಜೆಪಿ ಕಾರ್ಯಕರ್ತರನ್ನ ಓಡಿಸಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್, ಸೋಲಿನ ಭೀತಿಯಿಂದ ಬಿಜೆಪಿಯವರು ಅಶಾಂತಿ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಜೆಡಿಎಸ್ ನಾಯಕರು ಕಾಂಗ್ರೆಸ್ ನಾಯಕರ ವಿರುದ್ಧ ಗ್ಯಾರಂಟಿ ಕಾರ್ಡ್​ ಹಂಚಿಕೆ ಆರೋಪ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಗ್ಯಾರಂಟಿ ಕಾರ್ಡ್ ವಿತರಣೆ ಮಾಡಲಾಗಿದೆ ಎಂದು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಇನ್ನು ಹಾಸನದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್​​​ಡಿ ದೇವೇಗೌಡ, ಕಾಂಗ್ರೆಸ್​ನವರು ಗ್ಯಾರಂಟಿ ಪತ್ರ ಪ್ರದರ್ಶನ ಮಾಡಿದ್ದಾರೆ. ಇಲ್ಲಿ ಮನೆ ಮನೆಗೆ ಗ್ಯಾರಂಟಿ ಕಾರ್ಡ್​ ಹಂಚಿದ್ದಾರೆ ಎಂದು ಆರೋಪಿಸಿದ್ದಾರೆ.

ಇದೆಲ್ಲದರ ಮಧ್ಯೆ ಕಾಂಗ್ರೆಸ್ ಕಾರ್ಯಕರ್ತರು ಮತದಾನದ ದಿನವೂ ಚೊಂಬು ಅಭಿಯಾನ ನಡೆಸಿದ್ದಾರೆ. ಚೊಂಬು ಪೋಸ್ಟರ್ ಧರಿಸಿದ ಕಾಂಗ್ರೆಸ್ ಏಜೆಂಟರು, ‘ಚೊಂಬೇಶ್ವರನ ಸಹವಾಸ ದಿನವಿಡೀ ಉಪವಾಸ’ ಅಂತಾ ಅಭಿಯಾನ ಮಾಡಿದ್ದಾರೆ. ಅಲ್ಲದೆ, ಬೆಂಗಳೂರಿನ ಮಂಜುನಾಥ್ ನಗರದ ಗೌತಮ್ ಕಾಲೇಜು ಬಳಿ ರಾಷ್ಟ್ರೀಯ ಯುವಕಾಂಗ್ರೆಸ್ ಅಧ್ಯಕ್ಷ ಬಿವಿ ಶ್ರೀನಿವಾಸ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಖಾಲಿ ಚೊಂಬು ಹಾಗೂ ಗ್ಯಾಸ್ ಸಿಲಿಂಡರ್ ಪ್ರದರ್ಶನ ಮಾಡಿದ್ದಾರೆ.

ಇದೆಲ್ಲದರ ಮಧ್ಯೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಸಿಲಿನ ತಾಪಕ್ಕೆ ಮತದಾರರು ಹೈರಾಣದರು. ಮತ ಕೇಂದ್ರದಲ್ಲಿ ಶಾಮಿಯಾನ ಹಾಕದ್ದಕ್ಕೆ ಆಕ್ರೋಶ ಹೊರಹಾಕಿದರು.

ಅತ್ತ ಆನೇಕಲ್​ ಪಟ್ಟಣದಲ್ಲಿ ಪೆಂಡಾಲ್ ಹಾಕಿದ್ದಕ್ಕೆ ವಾಗ್ವಾದ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತರು ಹಾಕಿದ್ದ ಪೆಂಡಲ್​ಗಳಿಗೆ ಬಿಜೆಪಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು. ಮಂಡ್ಯ ಜಿಲ್ಲೆ ಶ್ರೀರಂಗ ಪಟ್ಟಣ ಮತ್ತು ಕೆಆರ್​ಎಸ್​ನಲ್ಲಿ ಮತಯಂತ್ರ ಕೈ ಕೊಟ್ಟಿತ್ತು. ಹೀಗಾಗಿ ಮತ ಯಂತ್ರ ಸರಿಪಡಿಸಲು ಅಧಿಕಾರಿಗಳು ಹರಸಾಹಸ ಪಟ್ಟರು.

 

 

WhatsApp Group Join Now
Telegram Group Join Now
Share This Article