ಧಾರವಾಡ: ನಾಡಹಬ್ಬ ದಸರಾ ಎಂದರೆ ನಮಗೆಲ್ಲ ನೆನಪಾಗುವುದು ಮೈಸೂರು ದಸರಾ ಜಂಬೂ ಸವಾರಿ ಉತ್ಸವ. ಆ ಮೈಸೂರು ಜಂಬೂ ಸವಾರಿ ಉತ್ಸವದ ಮಾದರಿಯಲ್ಲೇ ಧಾರವಾಡದಲ್ಲೂ ಪ್ರತಿವರ್ಷ ಜಂಬೂ ಸವಾರಿ ಉತ್ಸವ ಮಾಡಲಾಗುತ್ತದೆ.
ಜಂಬೂ ಸವಾರಿ ಉತ್ಸವ ಸಮಿತಿ ವತಿಯಿಂದ ಪ್ರತಿವರ್ಷ ನಡೆಸಲಾಗುವ ಈ ಜಂಬೂ ಸವಾರಿ ಉತ್ಸವ ಪ್ರಸಕ್ತ ವರ್ಷ ಕೂಡ ಅದ್ಧೂರಿಯಿಂದ ನೆರವೇರಿತು. ಎರಡು ಆನೆಗಳು ಈ ಉತ್ಸವದಲ್ಲಿ ಪಾಲ್ಗೊಂಡಿದ್ದವು. ಅಂಬಾರಿ ಒಳಗಡೆ ಬಂಡೆಮ್ಮ ದೇವಿಯ ಮೂರ್ತಿ ಇಟ್ಟು ಆ ಅಂಬಾರಿ ಹೊತ್ತ ಆನೆಯ ಮೆರವಣಿಗೆಗೆ ಗಾಂಧಿನಗರ ಈಶ್ವರ ದೇವಸ್ಥಾನದಿಂದ ಚಾಲನೆ ನೀಡಲಾಯಿತು.
ಈ ಜಂಬೂ ಸವಾರಿ ಉತ್ಸವಕ್ಕೆ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ದಿಂಗಾಲೇಶ್ವರ ಸ್ವಾಮೀಜಿ, ಬೆಳಗಾವಿ ಸಂಸದ ಜಗದೀಶ ಶೆಟ್ಟರ್, ಗುರುರಾಜ ಹುಣಸಿಮರದ ಸೇರಿದಂತೆ ಅನೇಕ ಮಠಾಧೀಶರು ಪುಷ್ಪ ಹಾಕುವ ಮೂಲಕ ಚಾಲನೆ ನೀಡಿದರು.
ಅಲ್ಲಿಂದ ಆರಂಭವಾದ ಜಂಬೂ ಸವಾರಿ ಉತ್ಸವವು ವಿದ್ಯಾಗಿರಿ, ಹೊಸಯಲ್ಲಾಪುರ, ಗಾಂಧಿಚೌಕ್, ಸುಭಾಷ ರಸ್ತೆ ಮೂಲಕ ಕಲಾಭವನದವರೆಗೂ ಸಾಗಿತು. ಈ ಉತ್ಸವದಲ್ಲಿ ದಿಂಡಿ ಮೇಳ, ಪುರವಂತರ ಮೇಳ, ಬೊಂಬೆ ಕುಣಿತ ಸೇರಿದಂತೆ ಇತ್ಯಾದಿ ಮೇಳದವರು ಪಾಲ್ಗೊಂಡಿದ್ದರು. ಈ ಜಂಬೂ ಸವಾರಿ ಉತ್ಸವವನ್ನು ಧಾರವಾಡದ ಜನ ರಸ್ತೆ ಬದಿ ನಿಂತು ಕುತೂಹಲದಿಂದ ವೀಕ್ಷಿಸಿದರು. ಒಟ್ಟಾರೆ ದಸರಾ ಹಬ್ಬದಂದು ಧಾರವಾಡದಲ್ಲಿ ನಡೆದ ಈ ಜಂಬೂ ಸವಾರಿ ಉತ್ಸವ ಕೂಡ ಎಲ್ಲರ ಗಮನಸೆಳೆಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹುಬ್ಬಳ್ಳಿಮೂರುಸಾವಿರ ಮಠದ ಗುರುಸಿದ್ದರಾಜಯೋಗೀಂದ್ರಸ್ವಾಮೀಜಿ ಹಾಗೂ ಹಾರನಹಳ್ಳಿಯ ಕೋಡಿಮಠದ ರಾಜಯೋಗೀಂದ್ರ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಚಾಲನೆ ಸಿಗಲಿದೆ. ಶಿರಹಟ್ಟಿಯ ದಿಂಗಾಲೇಶ್ವರ ಸ್ವಾಮೀಜಿ, ಕೂಡಲಸಂಗಮದ ಜಯ ಮೃತ್ಯುಂಜಯ ಸ್ವಾಮೀಜಿ, ಮಾಜಿ ಮುಖ್ಯ ಮಂತ್ರಿ ಜಗದೀಶ ಶಟ್ಟರ ಗುರುರಾಜ ಹುಣಸಿಮರದ, ಸೀಮಾ ಮಸೂತಿ, ಮಾಜಿ ಪಾಲಿಕೆ ಉಪ ಮಹಾಪೌರ ದೀಪಕ ಚಿಂಚೋರೆ ಸೇರಿದಂತೆ ಇತರರು ಇದ್ದರು.


