ಮಹಾಕುಂಭವು ಪೂರ್ವ ನಿರ್ಧಾರಿತವಾದಂತೆ ಫೆಬ್ರವರಿ 26ರಂದು ಸಮಾಪ್ತಿ

Ravi Talawar
ಮಹಾಕುಂಭವು ಪೂರ್ವ ನಿರ್ಧಾರಿತವಾದಂತೆ ಫೆಬ್ರವರಿ 26ರಂದು ಸಮಾಪ್ತಿ
WhatsApp Group Join Now
Telegram Group Join Now

ಮಹಾಕುಂಭ ನಗರ (ಉತ್ತರ ಪ್ರದೇಶ): ಪ್ರಯಾಗ್​ರಾಜ್​ನಲ್ಲಿ 144 ವರ್ಷಗಳ ಬಳಿಕ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಸಾಗರೋಪಾದಿಯಲ್ಲಿ ಕೋಟ್ಯಂತರ ಭಕ್ತರು ಆಗಮಿಸುತ್ತಿದ್ದಾರೆ. ಭಾರಿ ಜನದಟ್ಟಣೆ ಹಿನ್ನೆಲೆಯಲ್ಲಿ ಮಹಾಕುಂಭಮೇಳವನ್ನು ಪೂರ್ವ ನಿರ್ಧರಿತ ದಿನಾಂಕದಂದು ಮುಗಿಸದೇ, ವಿಸ್ತರಣೆ ಮಾಡಲಾಗುತ್ತಿದೆ ಎಂಬ ವದಂತಿಗಳು ಹರಡಿವೆ.

ಜನವರಿ 13ರಂದು ಆರಂಭಗೊಂಡಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಇದುವರೆಗೂ ನಿರೀಕ್ಷೆಗೂ ಮೀರಿ 50 ಕೋಟಿಗೂ ಅಧಿಕ ಜನರು ಭಾಗವಹಿಸಿ, ಪವಿತ್ರ ಸ್ನಾನ ಮಾಡಿದ್ದಾರೆ. ಅಲ್ಲದೇ, ಮಹಾಕುಂಭವು ಪೂರ್ವ ನಿರ್ಧಾರಿತವಾದಂತೆ ಫೆಬ್ರವರಿ 26ರಂದು ಸಮಾಪ್ತಿಯಾಗಲಿದೆ.

ಮಹಾಕುಂಭಮೇಳವು ವಿಸ್ತರಣೆ ಆಗಲಿದೆ ಎಂಬ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ವದಂತಿಗಳನ್ನು ಪ್ರಯಾಗರಾಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ರವೀಂದ್ರ ಮಂದರ್ ಮಂಗಳವಾರ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ”ಕಾರ್ಯಕ್ರಮದ ವೇಳಾಪಟ್ಟಿಯನ್ನು ಧಾರ್ಮಿಕ ಮುಹೂರ್ತಗಳನ್ನು (ಶುಭ ಸಮಯಗಳು) ಆಧರಿಸಿ ನಿರ್ಧರಿಸಲಾಗುತ್ತದೆ ಹಾಗೂ ಅದರಲ್ಲಿ ಯಾವುದೇ ಬದಲಾಣೆ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

“ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚನೆಗಳ ಪ್ರಕಾರ, ಆಡಳಿತವು ಎಲ್ಲ ಭಕ್ತರಿಗೆ ಸುಗಮ ಪ್ರಯಾಣ ಮತ್ತು ಇತರ ವ್ಯವಸ್ಥೆಗಳನ್ನು ಕಲ್ಪಿಸುತ್ತಿದೆ. ಮೇಳದ ದಿನಾಂಕ ವಿಸ್ತರಿಸಲು ಸರ್ಕಾರ ಅಥವಾ ಜಿಲ್ಲಾಡಳಿತದಿಂದ ಯಾವುದೇ ಪ್ರಸ್ತಾಪವಿಲ್ಲ. ಯಾತ್ರಿಕರು ಅಂತಹ ತಪ್ಪು ಮಾಹಿತಿ ನಂಬಬಾರದು” ಎಂದು ಡಿಎಂ ಹೇಳಿದ್ದಾರೆ.

”ತ್ರಿವೇಣಿ ಸಂಗಮದಲ್ಲಿ ಯಾವುದೇ ತೊಡಕುಗಳಿಲ್ಲದೇ ಪವಿತ್ರ ಸ್ನಾನ ಮಾಡಲು ಅನುಕೂಲವಾಗುವಂತೆ ಮಹಾಕುಂಭದ ಉಳಿದ ದಿನಗಳಲ್ಲಿಯೂ ಎಲ್ಲ ಅಗತ್ಯ ವ್ಯವಸ್ಥೆಗಳು ಮುಂದುವರೆಯಲಿದೆ. ಪ್ರಯಾಗ್‌ರಾಜ್‌ನಲ್ಲಿ ಭಕ್ತರ ಚಲನವಲನ ಮತ್ತು ಸಾಮಾನ್ಯ ಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳಲು ಆಡಳಿತವು ಸಂಚಾರ ನಿರ್ವಹಣೆಯತ್ತ ಗಮನಹರಿಸಿದೆ” ಎಂದು ತಿಳಿಸಿದರು.

WhatsApp Group Join Now
Telegram Group Join Now
Share This Article