ಬೆಂಗಳೂರು,11:ಬಹುಕೋಟಿ ವಾಲ್ಮೀಕಿ ಅಭಿವೃದ್ಧಿ ನಿಗಮ ಅವ್ಯವಹಾರದ ಮಾಸ್ಟರ್ ಮೈಂಡ್ ಮಾಜಿ ಸಚಿವ ನಾಗೇಂದ್ರ ಎಂಬುದನ್ನು ಸಾಕ್ಷಿ ಸಮೇತ ಜನಪ್ರತಿನಿಧಿಗಳ ಕೋರ್ಟ್ಗೆ ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ಇಡಿ ಉಲ್ಲೇಖಿಸಿದೆ. ಆರೋಪಿ ಸತ್ಯನಾರಯಣವರ್ಮ ಜೊತೆ ನಿಕಟ ಸಂಪರ್ಕ ಹೊಂದಿದ್ದ ಬಗ್ಗೆ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದ್ದು, ನಾಗೇಂದ್ರನ ಅಣತಿಯಂತೆಯೇ ಸಂಪೂರ್ಣ ಹಣದ ವಹಿವಾಟು ನಡೆದಿದೆ ಎಂದು ಉಲ್ಲೇಖಿಸಲಾಗಿದೆ.
ಲೋಕಸಭಾ ಚುನಾವಣೆಗೆ ಹಣ ಬಳಕೆ: ಅವ್ಯವಹಾರದ 21 ಕೋಟಿ ರೂಪಾಯಿ ಹಣವನ್ನು ಲೋಕಸಭಾ ಚುನಾವಣೆಗೆ ಬಳಸಿದ್ದಾರೆ. ಬೆಂಗಳೂರು ಮತ್ತು ಬಳ್ಳಾರಿಯಲ್ಲಿ ಮನಿಟ್ರಯಲ್ ನಡೆದಿದೆ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ. ನಾಗೇಂದ್ರ ಸೇರಿ 5 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ.
ಇ.ಡಿ ತನಿಖೆಯಿಂದ ಬಯಲಾದ ಅಸಲಿಯತ್ತು: ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಅವ್ಯವಹಾರ ಪ್ರಕರಣ ರಾಜ್ಯ ಸರ್ಕಾರವನ್ನು ತೀವ್ರ ಮುಜುಗರಕ್ಕೆ ಈಡು ಮಾಡಿತ್ತು. ಮಾಜಿ ಸಚಿವ ನಾಗೇಂದ್ರ ತಲೆದಂಡಕ್ಕೆ ಕಾರಣವಾದ ಹಗರಣದಲ್ಲಿ ರಾಜಕಾರಣಿಗಳ ಕೈವಾಡದ ಶಂಕೆ ವ್ಯಕ್ತವಾಗಿತ್ತು. ಹೈಗ್ರೌಂಡ್ಸ್ ಹೋಟೆಲ್ನ ಮೀಟಿಂಗ್ನಿಂದ ನಿಗಮದ ಲೆಕ್ಕ ಪರಿಶೋಧಕ ಚಂದ್ರಶೇಖರ್ ಆತ್ಮಹತ್ಯೆ ನಡೆದು ವಿಡಿಯೋ ವೈರಲ್ ಆಗುವವರೆಗೆ ಷಡ್ಯಂತ್ರ, ಅಕೌಂಟ್ ಟ್ರಾನ್ಸ್ ಕ್ಷನ್, ಎಂಜಿ ರಸ್ತೆಯ ಯೂನಿಯನ್ ಬ್ಯಾಂಕ್ ಅಕೌಂಟ್ ಓಪನ್ ಮಾಡಿದ್ದು, ತೆಲಾಂಗಣದ ಬ್ಯಾಂಕ್ ಗೆ ಹಣ ವರ್ಗಾವಣೆ, ಆಮೂಲಕ ಇತರರಿಗೆ ಹಣ ವರ್ಗಾವಣೆಗಳು ಒಂದಕ್ಕೊಂದು ಇಡೀ ಅವ್ಯವಹಾರದ ಚಿತ್ರಣ ಬಿಚ್ಚಿಟ್ಟಿದ್ದವು. ಇ.ಡಿ. ತನಿಖೆ ವೇಳೆ ಒಂದೊಂದೇ ಅಸಲಿಯತ್ತು ಅನಾವರಣಗೊಂಡಿತ್ತು.