ಮೂಡಲಗಿ : ಪುರಸಭೆ ಮತ್ತು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿನ ಅನಧಿಕೃತ ಸ್ವತ್ತುಗಳಿಗೂ ಸಹ ಇ- ಖಾತಾ ಅಭಿಯಾನವು ನಡೆಯಲಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕರೆ ನೀಡಿದರು.
ಶನಿವಾರದಂದು ಪುರಸಭೆ ಆವರಣದಲ್ಲಿ ಜರುಗಿದ ಇ – ಖಾತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಅಭಿಯಾನದಿಂದ ಬಡ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು. ಮೂಡಲಗಿ ಪುರಸಭೆಯ ವ್ಯಾಪ್ತಿಯಲ್ಲಿ ಸುಮಾರು 2500 ಕ್ಕೂ ಹೆಚ್ಚು ಆಸ್ತಿಗಳು ಇ – ಖಾತಾಕ್ಕೆ ಒಳಪಟ್ಟರೆ ಅಂದಾಜು 2 ರಿಂದ 2.50 ಕೋಟಿ ರೂಪಾಯಿಗಳ ಆದಾಯವು ಪುರಸಭೆಗೆ ಹರಿದು ಬರಲಿದೆ. ಫಲಾನುಭವಿಗಳು ತಕ್ಷಣವೇ ಪುರಸಭೆ ಅಧಿಕಾರಿಗಳನ್ನು ಸಂಪರ್ಕಿಸಿ ಇ ಖಾತಾ ಉತ್ತರಗಳನ್ನು ಪಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಮಧ್ಯವರ್ತಿಗಳನ್ನು ಸಂಪರ್ಕ ಮಾಡಬೇಡಿ ಎಂದು ಸಲಹೆ ನೀಡಿದ ಅವರು, ಈ ಅಭಿಯಾನವು ಮೇ ತಿಂಗಳ ಅಂತ್ಯದವರೆಗೆ ನಡೆಯಲಿದೆ ಎಂದರು.
ಸ್ಥಳೀಯ ಎಸ್ಸಿ ಕಾಲನಿಯ ಸುಮಾರು 300 ಕುಟುಂಬಗಳಿಗೆ ಖಾತಾ ಉತಾರಗಳನ್ನು ಮಾಡಿಕೊಟ್ಟು ಅಂಥ ಬಡ ಕುಟುಂಬಗಳಿಗೆ ಅನುಕೂಲ ಮಾಡಿಕೊಡುವಂತೆಯೂ ಅವರು ಅಧಿಕಾರಿಗಳಿಗೆ ಸೂಚಿಸಿದರು. ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ ಇದರಿಂದ ನಮ್ಗೂ ಸಹ ಅಡಚಣೆಯಾಗಿದೆ. ಕಳೆದ ಎರಡು ವರ್ಷಗಳಿಂದ ಯಾವ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಹೊಸ ಹೊಸ ಯೋಜನೆಗಳು ಸಾಕಾರಗೊಳ್ಳುತ್ತಿಲ್ಲ. ಮುಂದಿನ ತಿಂಗಳು ನಡೆಯಲಿರುವ ಬಜೆಟ್ ಅಧಿವೇಶನದಲ್ಲಿ ನಮ್ಮ ಕ್ಷೇತ್ರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ನೀಡುವಂತೆ ಮುಖ್ಯಮಂತ್ರಿಗಳನ್ನು ಕೋರಲಾಗುವುದು. ಹದಗೆಟ್ಟಿರುವ ರಸ್ತೆಗಳನ್ನು ಅಭಿವೃದ್ಧಿ ಮಾಡುವಂತೆಯೂ ಇದಕ್ಕಾಗಿ ಅನುದಾನವನ್ನು ನೀಡುವಂತೆಯೂ ಸಚಿವ ಸತೀಶ್ ಜಾರಕಿಹೊಳಿ ಅವರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ ಎಂದು ಅವರು ಹೇಳಿದರು.
ಬಹು ನಿರೀಕ್ಷಿತ ಮೂಡಲಗಿ ಮಿನಿ ವಿಧಾನ ಸೌಧ ನಿರ್ಮಾಣಕ್ಕೆ ನಿವೇಶನವನ್ನು ಗುರುತಿಸಲಾಗಿದೆ. ಆದರೆ ಸರ್ಕಾರದಿಂದ ಅನುದಾನದ ಕೊರತೆಯಿಂದ ವಿಳಂಬವಾಗುತ್ತಿದೆ. 8.60 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಮಿನಿ ವಿಧಾನ ಸೌಧ ನಿರ್ಮಾಣಕ್ಕೆ ಎಲ್ಲ ರೀತಿಯ ಪ್ರಯತ್ನಗಳು ನಡೆಯುತ್ತಿವೆ. ಮುಂದಿನ ಏಪ್ರಿಲ್ ತಿಂಗಳಲ್ಲಿ ಈ ಕಾಮಗಾರಿಗೆ ಗುದ್ದಲಿ ಪೂಜೆ ನಡೆಸುವ ಇರಾದೆ ಇದೆ. ಈ ವರ್ಷಾಂತ್ಯದಲ್ಲಿ ಹದಗೆಟ್ಟಿರುವ ಎಲ್ಲ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದೆಂದು ಎಂದು ತಿಳಿಸಿದರು.
ಇ – ಖಾತಾ ಅಭಿಯಾನವನ್ನು ಜಾರಿಗೆ ತರುವ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಒಳ್ಳೇ ಕೆಲಸವನ್ನು ಮಾಡಿದ್ದಾರೆ. ಇದರಿಂದ ಬಡ ಕುಟುಂಬಗಳಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ. ಉತ್ತಮವಾದ ಇ ಖಾತಾ ಯೋಜನೆಗೆ ಚಾಲನೆ ನೀಡಿದ ಮುಖ್ಯಮಂತ್ರಿಗಳಿಗೆ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಇದೇ ಸಂದರ್ಭದಲ್ಲಿ ವಿದ್ಯುಕ್ತವಾಗಿ ಎರಡು ಕುಟುಂಬದವರಿಗೆ ಇ – ಖಾತಾ ಉತಾರಗಳನ್ನು ನೀಡುವ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಿದರು.
ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷೆ ಖುರ್ಶದಾ ನದಾಫ, ಉಪಾಧ್ಯಕ್ಷೆ ಭೀಮವ್ವ ಪೂಜೇರಿ, ಪುರಸಭೆ ಸದಸ್ಯರಾದ ಸಂತೋಷ ಸೋಣವಾಲ್ಕರ, ರವಿ ಸಣ್ಣಕ್ಕಿ, ಹಣಮಂತ ಗುಡ್ಲಮಣಿ, ಜಯಾನಂದ ಪಾಟೀಲ, ಸುಭಾಸ್ ಸಣ್ಣಕ್ಕಿ, ಅಬ್ದುಲ್ ಡಾಂಗೆ, ಆನಂದ ಟಪಾಲದಾರ್, ಈರಪ್ಪ ಮುನ್ಯಾಳ, ಹುಸೇನ್ ಶೇಖ, ಅದಮ ತಂಬೋಳಿ, ಶಿವು ಸಣ್ಣಕ್ಕಿ, ನಾಮ ನಿರ್ದೇಶಿತ ಸದಸ್ಯರು, ಮುಖ್ಯಾಧಿಕಾರಿ ತುಕಾರಾಂ ಮಾದರ, ಹಲವು ಗಣ್ಯರು, ಉಪಸ್ಥಿತರಿದ್ದರು.