ಬೆಂಗಳೂರು, ಫೆಬ್ರವರಿ 14: ಈ ಶೈಕ್ಷಣಿಕ ವರ್ಷದ (2025-26) 6 ನೇ ಸೆಮಿಸ್ಟರ್‌ನಲ್ಲಿರುವ ಡಿಪ್ಲೊಮಾ ಮತ್ತು ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಕಡ್ಡಾಯಗೊಳಿಸಲು ತಾಂತ್ರಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಸಿ-25 ಪಠ್ಯಕ್ರಮದಲ್ಲಿ, ಯಾವುದಾದರೂ ಉದ್ಯಮದಲ್ಲಿ 13 ವಾರಗಳ ಇಂಟರ್ನ್‌ಶಿಪ್ ಅಥವಾ ಯಾವುದಾದರೂ ಉದ್ಯಮದಲ್ಲಿ ಪ್ರಾಜೆಕ್ಟ್ ಒಂದನ್ನು ಪೂರೈಸುವುದು ಕಡ್ಡಾಯವಾಗಿದೆ ಎಂದು ಇಲಾಖೆ ಪ್ರಕಟಿಸಿದೆ.
ನಾವು ಕೈಗಾರಿಕೆಗಳೊಂದಿಗೆ ಸಮಾಲೋಚಿಸಿ ಸಿ -25 ಪಠ್ಯಕ್ರಮವನ್ನು ರೂಪಿಸಿದ್ದೇವೆ. ಈ ವಿಚಾರಕ್ಕೆ ಸಂಬಂಧಿಸಿದ ಸಮಾಲೋಚನೆಯ ಸಮಯದಲ್ಲಿ, ಉದ್ಯಮ ವಲಯದ ಪ್ರತಿನಿಧಿಗಳು ಪ್ರಾಯೋಗಿಕ ಅನುಭವದ ಅಗತ್ಯದ ಬಗ್ಗೆ ಹೇಳಿದ್ದರು. ಆದ್ದರಿಂದ, ಇಂಟರ್ನ್‌ಶಿಪ್ ಕಡ್ಡಾಯಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ ಮೂಲಗಳು ತಿಳಿಸಿವೆ.