ಬೆಂಗಳೂರು (ಸೆ.19): ಜಾತಿಗಣತಿ ಸಮೀಕ್ಷೆ ವಿರೋಧಿಗಳಿಗೆ ಜಗ್ಗದ ಸಿಎಂ ಸಿದ್ದರಾಮಯ್ಯ ತಮ್ಮ ಕನಸಿನ ಯೋಜನೆಯಾದ ಜಾತಿ ಗಣತಿಯನ್ನ ನಿಗದಿಯಂತೆ ನಡೆಸುವ ನಿರ್ಧಾರ ತೆಗೆದುಕೊಂಡಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಜೊತೆ ಚರ್ಚಿಸಿ ಅಂತಿಮವಾಗಿ ಸಿಎಂ ಸಿದ್ದರಾಮಯ್ಯ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗ್ತಿದೆ. ಜಾತಿಗಣತಿ ಬಗ್ಗೆ ಎದ್ದಿರುವ ಗೊಂದಲಕ್ಕೂ ತೆರೆ ಎಳೆಯಲು ಸಭೆಯಲ್ಲಿ ನಿರ್ಧರಿಸಿದ್ದು, 331 ಉಪಜಾತಿಗಳ ಕಾಲಂ ತೆಗೆದುಹಾಕುವ ನಿರ್ಣಯ ಕೈಗೊಳ್ಳಲಾಗಿದೆ.
ರಾತ್ರಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಹುತೇಕ ಸಚಿವರು ಜಾತಿ ಗಣತಿಯನ್ನು ವಿರೋಧಿಸಿದ್ರು ಎನ್ನಲಾಗಿತ್ತು. ಹೀಗಾಗಿ ಸಿಎಂ ಸಿದ್ದರಾಮಯ್ಯ ಇಂದು ಕಾವೇರಿ ನಿವಾಸದಲ್ಲಿ ಮಹತ್ವದ ಸಭೆ ನಡೆಸಿದ್ರು. ಸಭೆ ಬಳಿಕ ಸುರ್ಜೇವಾಲಾ ಭೇಟಿಗೆ ಹೊರಟ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಒಟ್ಟಿಗೆ ತೆರಳಿದ್ರು.
ಖಾಸಗಿ ಹೋಟೇಲ್ ನಲ್ಲಿ ಸಿಎಂ ಜೊತೆಗೆ ಸುರ್ಜೇವಾಲಾ ಸಭೆ ನಡೆಸಿದ್ದು, ಜಾತಿ ಗಣತಿ ಸಮೀಕ್ಷೆ ಕುರಿತು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗ್ತಿದೆ. ಜಾತಿಗಣತಿ ಪರ ವಿರೋಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಸುರ್ಜೇವಾಲಾ ಅವರುಗೆ ಮಾಹಿತಿ ನೀಡಿದ್ದಾರಂತೆ.