ಬೆಳಗಾವಿ/ಸಿಂಧುದುರ್ಗ: ಬೆಳಗಾವಿ ಜಿಲ್ಲೆಯ ಒಂದೇ ಕುಟುಂಬದ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರೆ, ನಾಲ್ವರು ಕಣ್ಮರೆಯಾಗಿರುವ ದುರಂತ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಸಿರೋಡಾ ಸಮುದ್ರದಲ್ಲಿ ನಡೆದಿದೆ.
ದಸರಾ ರಜೆಗೆಂದು ಎಂಟು ಜನರನ್ನು ಒಳಗೊಂಡ ಖಾನಾಪುರ ತಾಲೂಕಿನ ಲೋಂಡಾ ಗ್ರಾಮದ ಕುಟುಂಬವು ಕಡಲ ತೀರಕ್ಕೆ ಪ್ರವಾಸಕ್ಕೆ ತೆರಳಿತ್ತು. ಈ ವೇಳೆ ದುರಂತ ಸಂಭವಿಸಿದೆ.
ಈಗಾಗಲೇ ಮೂವರು ಶವವಾಗಿ ಪತ್ತೆಯಾಗಿದ್ದು, ರಕ್ಷಿಸಲಾದ ಓರ್ವ ಮಹಿಳೆ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸಮುದ್ರದಲ್ಲಿ ಕಣ್ಮರೆ ಆಗಿರುವ ಇನ್ನುಳಿದ ನಾಲ್ವರಿಗೆ ಶೋಧ ಕಾರ್ಯ ನಡೆದಿದೆ.
ಇಸ್ರಾರ್ ಕಿತ್ತೂರ (17), ಇಬಾದ್ ಕಿತ್ತೂರ (13), ಅಳ್ನಾವರ ಮೂಲದ ನಮೀರಾ ಅಕ್ತರ್ (16) ಮೃತ ದುರ್ದೈವಿಗಳು. ಸುದ್ದಿ ಗೊತ್ತಾಗುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಲೋಂಡಾದ ಪ್ರಹಾನಾ ಕಿತ್ತೂರ (34) ಎಂಬ ಮಹಿಳೆಯನ್ನು ರಕ್ಷಿಸಲಾಗಿದ್ದು, ಮಹಾರಾಷ್ಟ್ರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಇರ್ಫಾನ್ ಕಿತ್ತೂರ (36), ಇಕ್ವಾನ್ ಕಿತ್ತೂರ (15), ಮಹಾರಾಷ್ಟ್ರ ಮೂಲದ ಪರಯಾನ್ ಮನಿಯಾರ್ (20) ಜಾಕಿರ್ ಮನಿಯಾರ್ (13) ನಾಪತ್ತೆಯಾದವರು ಎಂಬ ಮಾಹಿತಿ ಲಭ್ಯವಾಗಿದೆ.