ಕೊಪ್ಪಳ, ಜನವರಿ 11: ರಾಜ್ಯದ ಅನೇಕ ವಿವಿಧೆಡೆ ಪ್ರತಿನಿತ್ಯ ಹತ್ತಾರು ಕಡೆ ಜಾತ್ರೆಗಳು ನಡೆಯುತ್ತವೆ. ದೇವರ ದರ್ಶನ, ರಥೋತ್ಸವ, ಮನರಂಜನೆ ಕಾರ್ಯಕ್ರಮಗಳಲ್ಲಿ ಬಾಗಿಯಾಗಿ ಲಕ್ಷಾಂತರ ಜನರು ಸಂತಸ ಪಡುತ್ತಾರೆ. ಆದರೆ, ಜಾತ್ರೆಯನ್ನು ಜಾಗೃತಿ ಮೂಡಿಸಲು ಬಳಸಿಕೊಂಡು, ಅರ್ಥಪೂರ್ಣವಾದ ಜಾತ್ರೆಯನ್ನು ಮಾಡುವದು ಕೊಪ್ಪಳದ ಸುಪ್ರಸಿದ್ದ ಗವಿಸಿದ್ದೇಶ್ವರ ಮಠ ಕೊಪ್ಪಳ ಗವಿಮಠದ ಜಾತ್ರೆ ಕೇವಲ ಜನಸ್ತಮೂಹ, ರುಚಿಕಟ್ಟಾದ ಊಟಕ್ಕೆ ಮಾತ್ರ ಹೆಸರುವಾಸಿಯಾಗಿಲ್ಲ, ಸಾಮಾಜಿಕ ಕಳಕಳಿಯಿಂದ ಕೂಡ ಹೆಸರಾಗಿದೆ.
ನಾಡಿನ ಅನೇಕ ಕಡೆಯಿಂದ ಬರುವ ಭಕ್ತರು ಗವಿಸಿದ್ದೇಶ್ವರ ಮಠದ ಜಾತ್ರೆಯನ್ನು ಕಣ್ತುಂಬಿಕೊಂಡು, ಕೃತಾರ್ಥರಾಗುತ್ತಾರೆ. ಆದರೆ, ಕೇವಲ ಜಾತ್ರೆ ಮಾಡಿ, ರಥ ಎಳೆದು, ಕಾರ್ಯಕ್ರಮಗಳನ್ನು ಆಯೋಜಿಸಿದರೆ ಸಾಲದು, ಜಾತ್ರೆಗಳ ಮುಖಾಂತರ ಅರಿವನ್ನು ಮೂಡಿಸುವ ಮತ್ತು ಸಾಮಾಜಿಕ ಕಳಕಳಿಯನ್ನು ಸಾರುವ ಕೆಲಸವಾಗಬೇಕು ಎಂಬುವುದು ಕೊಪ್ಪಳ ಗವಿಮಠದದ ಪೀಠಾಧಿಪತಿ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯವರ (Abhinava Gavisiddeshwara Swamiji) ಕಳಕಳಿಯಾಗಿದೆ. ಹೀಗಾಗಿ ಕಳೆದ ಒಂದು ದಶಕದಿಂದ ಜಾತ್ರೆ ಜೊತೆಗೆ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದಾರೆ. ನಾಡಿನ ಜ್ವಲಂತ ಸಮಸ್ಯೆಗಳ ಪೈಕಿ, ಪ್ರತಿವರ್ಷ ಒಂದೊಂದು ಸಮಸ್ಯೆಗಳನ್ನು ಎತ್ತಿಕೊಂಡು, ಅವುಗಳ ನಿವಾರಣೆಗಾಗಿ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸುವುದು ಮಠದ ಸಂಪ್ರದಾಯವಾಗಿ ಬೆಳೆದುಕೊಂಡು ಬರುತ್ತಿದೆ.