ಬೆಂಗಳೂರು, ಅಕ್ಟೋಬರ್ 06: ರಾಜ್ಯದಲ್ಲಿ ಜಾತಿಗಣತಿ ಶುರಾಗಿರುವ ಬೆನ್ನಲ್ಲೇ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ. ಪ್ರತ್ಯೇಕ ಧರ್ಮದ ಸ್ಥಾನಮಾನಕ್ಕಾಗಿ ಹಲವು ಸ್ವಾಮೀಜಿಗಳು ಪಟ್ಟು ಹಿಡಿದಿದ್ದು, ಸಮೀಕ್ಷೆ ಸಮಯದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಬರೆಸಲೂ ಕರೆ ನೀಡಿದ್ದಾರೆ. ಇದಕ್ಕೆ ಪೂರಕವೆಂಬಂತೆ ನಿನ್ನೆ (ಅ.5) ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿದ್ದ ಬಸವ ಸಾಂಸ್ಕೃತಿಕ ಅಭಿಯಾನದ ಸಮಾರೋಪ ಸಮಾರಂಭದಲ್ಲಿಯೂ ಇದೇ ವಿಚಾರ ಪ್ರತಿಧ್ವನಿಸಿದೆ.
ಜೈನರು, ಸಿಖ್ಖರು, ಬೌದ್ಧರಿಂದ ಯಾರಿಗಾದರೂ ತೊಂದರೆ ಆಯ್ತಾ? ಹಾಗೆಯೇ ಲಿಂಗಾಯತ ಧರ್ಮ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ಕಳೆದ ಬಾರಿ ಈ ವಿಚಾರ ವಿವಾದವಾದಾಗ ಅದನ್ನ ಸಿಎಂ ಸಿದ್ದರಾಮಯ್ಯ ತಲೆಗೆ ಕಟ್ಟಲಾಗಿತ್ತು. ಹಿಂದೆ ಆಟ ಆಡಿದ ಹಾಗೆ ಈಗ ಆಟ ಆಡಲು ಆಗುವುದಿಲ್ಲ. ಭೌಗೋಳಿಕವಾಗಿ ನಾವೆಲ್ಲ ಭಾರತೀಯರು, ಹಿಂದೂಗಳು. ಲಿಂಗಾಯತ ಧರ್ಮದವರು ಚತುರ್ವರ್ಣದಿಂದ ಹೊರಗೆ ಉಳಿದಿದ್ದೇವೆ. ನಿನ್ನೆ ಮಠಾಧಿಪತಿಗಳ ಒಕ್ಕೂಟದಿಂದ ಕಾರ್ಯಕ್ರಮ ನಡೆದಿದ್ದು, ದ್ವಂದ್ವ ನಿಲುವು ಇರುವವರನ್ನು ಸಭೆಗೆ ಕರೆದಿಲ್ಲ. ವೀರಶೈವ ಮಹಾಸಭಾ ಕೂಡ ಒಂದು ಹಂತಕ್ಕೆ ಹತ್ತಿರ ಬಂದಿದೆ. ನಾವು ಹಿಂದೂ ವಿರೋಧಿಗಳಲ್ಲ, ವೀರಶೈವ ವಿರೋಧಿಗಳೂ ಅಲ್ಲ. ಒಬಿಸಿಗೆ ಸೇರಿಸಿ ಎಂಬುದರಲ್ಲಿ ತಪ್ಪೇನಿದೆ ಎಂದು ಸಚಿವ ಎಂ.ಬಿ. ಪಾಟೀಲ್ ಪ್ರಶ್ನಿಸಿದ್ದಾರೆ.


